ಕರ್ನಾಟಕ ರಾಜ್ಯ ಸರ್ಕಾರ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಸರ್ಕಾರವನ್ನು ವಜಾ ಮಾಡಬೇಕು. ಆರೋಪಗಳ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ನವೆಂಬರ್ 25ರಂದು ರಾತ್ರಿ ರಾಜಭವನಕ್ಕೆ ತೆರಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿ.ಎಸ್. ಉಗ್ರಪ್ಪ ಮತ್ತು ರಾಮಲಿಂಗಾರೆಡ್ಡಿ ನೇತೃತ್ವದ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿ ಸರ್ಕಾರವನ್ನು ವಜಾಗೊಳಿಸಿ, ಸಂವಿಧಾನದ 356 ವಿಧಿ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು ಏಂದು ಆಗ್ರಹಿಸಿದರು.
ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕರು, ರಾಜ್ಯದಲ್ಲಿನ ಗುತ್ತಿಗೆದಾರರು ಸರ್ಕಾರಕ್ಕೆ ಶೇಕಡ 40ರಷ್ಟು ಕಮಿಷನ್ ನೀಡಬೇಕು ಹೇಳುತ್ತಿದೆ ಎಂದು ದೂರು ನೀಡಿದ್ದಾರೆ. ಆದರೆ ಶೇ.56-57ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಗುತ್ತಿಗೆದಾರರು ನೀಡಿರುವ ಶೇ.40ರಷ್ಟು ಕಮಿಷನ್ ಪಡೆಯುತ್ತಿರುವ ಸರ್ಕಾರದ ವಿರುದ್ಧದ ದೂರಿನ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ. ಈ ಹಿನ್ನೆಯಲ್ಲಿ ರಾಜ್ಯಪಾಲರು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಸಂವಿಧಾನದ 356 ವಿಧಿಯನ್ವಯ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು ಎಂದು ಒತ್ತಾಯಿಸಿದರು.
ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕಾರ್ಪೋರೇಷನ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಯೋಜನೆ ರೂಪಿಸುವಾಗ 100 ಕೋಟಿ ವೆಚ್ಚದ ನಿರೀಕ್ಷೆ ಇದ್ದರೆ ಅದನ್ನು ದ್ವಿಗುಣಗೊಳಿಸಿ ಯೋಜನೆ ರೂಪಿಸಿದ್ದು ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನೀರಾವರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ರಾಜ್ಯದಲ್ಲಿ ಪಾರದರ್ಶಕತೆ ಎಂಬುದು ಮಾಯವಾಗಿದೆ. ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಎಸಿಬಿ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ದ ಹಂತಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.