ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ರೈತರೇ ಕಾರಣ ಎಂಬ ಕೇಂದ್ರ ಸರ್ಕಾರದ ವಾದಕ್ಕೆ ಸುಪ್ರೀಂ ಕೋರ್ಟ್ ಗರಂ ಆಗಿದೆ.
“ನಿಮ್ಮ ಪ್ರಮಾಣಪತ್ರವು ಮಾಲಿನ್ಯಕ್ಕೆ ರೈತರೇ ಹೊಣೆ ಎಂಬಂತಿದೆ. ಮೊದಲು ದೆಹಲಿಯ 70ರಷ್ಟು ಜನರನ್ನು ನಿಯಂತ್ರಿಸಿ. ಪಟಾಕಿ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವಿಧಾನ ಎಲ್ಲಿದೆ ಎಂದು ಸುಪ್ರೀಂಕೋರ್ಟ್ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರನ್ನು ಪ್ರಶ್ನಿಸಿತು.
ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ತುರ್ತು ಎಂದು ಪರಿಗಣಿಸಿರುವ ಸುಪ್ರೀಂಕೋರ್ಟ್ ವಾಹನ ಓಡಾಟವನ್ನು ನಿಲ್ಲಿಸುವುದು, ಲಾಕ್ ಡೌನ್ ಬಿಗಿಗೊಳಿಸಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ.
ಮಾಲಿನ್ಯವು ಅಂತಿಮವಾಗಿ ಕಡಿಮೆಯಾಗಬೇಕೆಂದು ನಾವು ಬಯಸುತ್ತೇವೆ. ಬೇರೇನೂ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ವಾಹನಗಳು ಹೊರಸೂಸುವ ಹೊಗೆ, ಪಟಾಕಿ, ಧೂಳು, ಮಾಲಿನ್ಯಕ್ಕೆ ಕಾರಣಗಳಿವೆ. ಕೇವಲ ಹುಲ್ಲನ್ನು ಸುಡುವುದರಿಂದ ಅಲ್ಲ ಎಂದು ಹೇಳಿತು.
“ರೈತರು ಹುಲ್ಲನ್ನು ಸುಡುವುದರಿಂದಲೂ ಕೆಲ ಅಂಶ ಮಾಲಿನ್ಯವಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಇನ್ನುಳಿದಂತೆ ಪಟಾಕಿ ಸುಡುವುದು, ವಾಹನ ಮಾಲಿನ್ಯ, ಕೈಗಾರಿಕೆಗಳಿಂದ ಬರುವ ಹೊಗೆ, ಧೂಳು ಇತ್ಯಾದಿ ಕಾರಣಗಳಿಂದ ವಾಯು ಮಾಲಿನ್ಯ ಹೆಚ್ಚಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ದೆಹಲಿಯಲ್ಲಿ ಗಾಳಿಗುಣಮಟ್ಟವನ್ನು 500 ರಿಂದ 200 ಪಾಯಿಂಟ್ ಗಳಿಗೆ ತರುವುದು ಹೇಗೆ ಎಂದರೆ ಎರಡು ದಿನಗಳ ಲಾಕ್ ಡೌನ್ ನಂತಹ ಕೆಲವು ತಕ್ಷಣದ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಪೀಠ ಸೂಚಿಸಿದೆ.
ಪರಿಸರ ಕಾರ್ಯಕರ್ತ ಆದಿತ್ಯ ದುಬೆ ಮತ್ತು ಕಾನೂನು ವಿದ್ಯಾರ್ಥಿ ಅಮನ್ ಬಂಕ ಅವರು ಸಲ್ಲಿಸಿದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉಚಿತವಾಗಿ ಹುಲ್ಲು ತೆಗೆಯುವ ಯಂತ್ರಗಳನ್ನು ಒದಗಿಸಲು ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದರು.