ಸೈನಿಕರು, ರೈತರು, ವೈದ್ಯರು, ಶಿಕ್ಷಕರು ನಮ್ಮ ತಂದೆ ತಾಯಿಯಷ್ಟೇ ಸ್ಮರಣೀಯರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ಬೃಹತ್ “ಜೈ ಹಿಂದ್ ಸಭಾ” ಕಾರ್ಯಕ್ರಮದಲ್ಲಿ ಭಾರತೀಯ ಯೋಧರ ಪರಂಪರೆಯನ್ನು ಶ್ಲಾಘಿಸಿ, ನಿವೃತ್ತ ಯೋದ ಸಮೂಹವನ್ನು ಸನ್ಮಾನಿಸಿ, ಹುತಾತ್ಮ ಯೋಧರ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಪುರಸ್ಕರಿಸಿ ಮಾತನಾಡಿದರು.
ತ್ಯಾಗ ಮನೋಭಾವದಿಂದ ಯೋಧರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿಯಲ್ಲ. 140 ಕೋಟಿ ಭಾರತೀಯರ ಜವಾಬ್ದಾರಿ ಎಂದರು.
ಶಿಷ್ಟ ರಕ್ಷಣೆ-ದುಷ್ಟರ ಸಂಹಾರದ ವಿಚಾರದಲ್ಲಿ ಭಾರತ ತನ್ನ ಇತಿಹಾಸದಲ್ಲೇ ಯಾವತ್ತೂ ರಾಜಿ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯರ ಬದ್ಧತೆ ಎಂದು ಶ್ಲಾಘಿಸಿದರು.
ಸಿಎಂ ಮಹತ್ವದ ಘೋಷಣೆ
ಯೋಧರ ಕ್ಯಾಂಟೀನ್ ಗೆ ಅಬಕಾರಿ ಸುಂಕ ಹಾಕುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಘೋಷಣೆ ಮಾಡಿದರು.
ಹಾಗೆಯೇ ನಿವೃತ್ತ ಯೋಧರ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿರುವ ಎಲ್ಲಾ ಮಾಜಿ ಯೋಧರಿಗೆ ನೆರವಾಗಲು ಪ್ರತ್ಯೇಕ ನಿಗಮ (ಕಾರ್ಪೊರೇಷನ್) ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸೈನಿಕರ ವಿಭಾಗದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರ ಸಲಹೆ ಮೇರೆಗೆ ಕಾರ್ಪೊರೇಷನ್ ರಚಿಸಲು ಆಲೋಚಿಸುತ್ತಿದ್ದೇವೆ. ನಮ್ಮ ದೇಶಕ್ಕೆ ಸೇವೆ ಸಲ್ಲಿಸಿರುವ ಯೋಧರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಇಂತಹ ಅತ್ಯಂತ ಮಹತ್ವದ ಕಾರ್ಯಕ್ರಮದ ಭಾಗವಾಗಿರುವುದು ಹೆಮ್ಮೆಯ ವಿಚಾರ. ದೇಶಕ್ಕೆ ಶಕ್ತಿ ತುಂಬಿರುವ ನಿಮ್ಮಲ್ಲರಿಗೆ ದೇಶ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಾಂಗ್ರೆಸ್ ಪಕ್ಷ ಸದಾ ದೇಶ ಹಾಗೂ ನಮ್ಮ ಸಶಸ್ತ್ರ ಪಡೆಗಳ ಪರವಾಗಿ ನಿಲ್ಲಲಿದೆ. ನಿಮ್ಮ ಕೊಡುಗೆಯನ್ನು ಸದಾ ಸ್ಮರಿಸಲಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ” ಎಂದರು.


