ಪೊಲೀಸ್ ಬೆಂಗಾವಲಿನಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಹೇಮಾವತಿ ಎಕ್ಸ್ ಪ್ರೆಸ್ ಪೈಪ್‌ಲೈನ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಮೇ.31ರ ಪ್ರತಿಭಟನೆಯಲ್ಲಿ ತುಮಕೂರು ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ ತಿಳಿಸಿದ್ದಾರೆ.
ತುಮಕೂರು ತಾಲೂಕಿನ ಹೆಬ್ಬೂರಿನ ಪುಟ್ಟಣ್ಣಯ್ಯ ರೈತಭವನದಲ್ಲಿ ಆಯೋಜಿಸಿದ್ದ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಸದಸ್ಯರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ, ರೈತ ಸಂಘ, ರೈತರು, ಜನಪ್ರತಿನಿಧಿಗಳು ಹೋರಾಟ ನಡೆಸುತ್ತಾ ಬಂದಿದ್ದರೂ ಸಹ ಸರಕಾರ ಗಮನ ಕೊಟ್ಟಿಲ್ಲ. ರೈತರು, ನಾಗರಿಕರ ಪ್ರತಿಭಟನೆಗೆ ಮಣಿದು ರಚಿಸಿದ್ದ ತಾಂತ್ರಿಕ ಸಮಿತಿಯ ವರದಿಯನ್ನು ಸಹ ಬಹಿರಂಗಪಡಿಸಿಲ್ಲ. ಇದರ ಹಿಂದೆ ಷಡ್ಯಂತ್ರವಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಹಾಗಾಗಿ ಮೇ.31ರಂದು ರೈತರು, ಕಾರ್ಮಿಕರು, ನಾಗರಿಕರು, ಜನಪ್ರತಿನಿಧಿಗಳು ಆಯೋಜಿಸಿರುವ ಬೃಹತ್ ಪ್ರತಿಭಟನಾ ಚಳವಳಿಯಲ್ಲಿ ಭಾಗವಹಿಸಿ, ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದರು.
ತುಮಕೂರು ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಜೀವನಾಡಿ ಹೇಮಾವತಿ ನೀರನ್ನು ಮಾಗಡಿಯತ್ತ ಕದ್ದೊಯ್ಯುವ ಪ್ರಭಾವಿ ಸಚಿವರ ಹುನ್ನಾರ ರೈತರನ್ನು ಕೆರಳಿಸಿದೆ. ಅವೈಜ್ಞಾನಿಕವಾಗಿ ಪೈಪ್‌ಲೈನ್ ನಿರ್ಮಿಸಿ ನೀರು ಕಳ್ಳತನ ಮಾಡುವ ಬಗ್ಗೆ ಈಗಾಗಲೇ ರೈತರು ಎಚ್ಚರಿಕೆ ನೀಡಿದ್ದರೂ ಕೆಲಸ ಮಾಡಲು ಅಧಿಕಾರಿಗಳು ಬರುತ್ತಿದ್ದಾರೆ. ಮುಂದಿನ ಆಗು ಹೋಗುಗಳಿಗೆ ಅಧಿಕಾರಿಗಳು ಹೊಣೆ ಆಗುತ್ತಾರೆ ಎಂದು ಎಚ್ಚರಿಸಿದ ಅವರು ಮುಖ್ಯ ನಾಲೆಯನ್ನು ಅತ್ಯಾಧುನಿಕವಾಗಿ ಮಾರ್ಪಾಡು ಮಾಡಲಾಗಿದೆ. ಕುಣಿಗಲ್‌ಗೆ 3 ಟಿಎಂಸಿ ನೀರು ಹಾಗೂ ಮಾಗಡಿಗೆ 66 ಎಂಸಿಎಫ್‌ಟಿ ಮುಖ್ಯ ನಾಲೆಯಲ್ಲಿ ಹರಿಸಿಕೊಳ್ಳಲಿ. ಕಾಂಗ್ರೆಸ್ ಶಾಸಕರು, ಸಚಿವರು ಕೂಡಾ ತುಟಿ ಬಿಚ್ಚಿಲ್ಲ. ಈ ಮೌನಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಸಕರಾರ ಈ ಕೂಡಲೇ ಅವೈಜ್ಞಾನಿಕ ಹಾಗೂ ಜಿಲ್ಲೆಗೆ ಮಾರಕವಾಗುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಕಾರ್ಯದರ್ಶಿ ತಿಮ್ಮೇಗೌಡ, ಉಪಾಧ್ಯಕ್ಷ ಕೃಷ್ಣಮೂರ್ತಿ, ರಂಗಸ್ವಾಮಯ್ಯ, ರಾಜು, ಸಂಚಾಲಕ ಮಹೇಶ್, ತಾಲೂಕು ಮುಖಂಡರಾದ ಶ್ರೀನಿವಾಸ್, ಸಿದ್ದರಾಜು, ಪುಟ್ಟಸ್ವಾಮಿ, ಸುರೇಶ್, ಈಶಣ್ಣ, ರಾಜಣ್ಣ ಮತ್ತಿತರರು ಹಾಜರಿದ್ದರು.


