ನಿಷೇಧಾಜ್ಞೆ ನಡುವೆಯೂ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ರೈತರು, ರಾಜಕೀಯ ಪಕ್ಷಗಳ ನಾಯಕರು ಹಾಗೂ ಮಠಾಧೀಶರು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸಲು ಅವಕಾಶ ನೀಡದೆ ಪೊಲೀಸರು ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದರು.
ಹೋರಾಟ ನಡೆಸಲು ಮುಂದಾದ ಶಾಸಕ ಸುರೇಶ್‌ಗೌಡ, ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ರೈತ ಸಂಘದ ಎ.ಗೋವಿಂದರಾಜು ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ನಿಟ್ಟೂರು ಸಮೀಪದ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹೋರಾಟಗಾರರು ಸಮಾವೇಶಗೊಂಡಿದ್ದರು. ಈ ಮಾಹಿತಿ ತಿಳಿದ ಪೊಲೀಸರು ತಕ್ಷಣ ಧಾವಿಸಿ ಇವರನ್ನು ವಶಕ್ಕೆ ಪಡೆದಿದ್ದಾರೆ.
ಗುಬ್ಬಿ ತಾಲ್ಲೂಕಿನ ಸಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನೂರಾರು ರೈತರು ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ನಿಟ್ಟೂರು, ಸುಂಕಾಪುರ ಹಾಗೂ ಡಿ. ರಾಂಪುರ ಸೇರಿದಂತೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆದರೂ ರೈತರು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಬೃಹತ್ ಚರಂಡಿಗೆ ಮಣ್ಣ ಹಾಕಿ ಪ್ರತಿಭಟನೆ ನಡೆಸಿದರು.
ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ 4 ಡಿವೈಎಸ್ಪಿ, 23 ಇನ್ಸ್‌ಪೆಕ್ಟರ್, 900 ಪೊಲೀಸರು ಸೇರಿದಂತೆ 1 ಸಾವಿರಕ್ಕೂ ಅಧಿಕ ಮಂದಿ ಪೊಲೀಸರು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ 3 ಕೆಎಸ್‌ಆರ್‌ಪಿ ತುಕಡಿಗಳನ್ನು ಕಾಮಗಾರಿ ಸ್ಥಳದ ಸುತ್ತಮುತ್ತ ಬಂದೋಬಸ್ತ್ ಕಾರ್ಯಕ್ಕೆ ಹಾಕಲಾಗಿತ್ತು.

ತುಮಕೂರು ಜಿಲ್ಲೆಯ ಜನರ ತೀವ್ರ ವಿರೋಧದ ನಡುವೆಯೂ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಿರುವುದನ್ನು ವಿರೋಧಿಸಿ ನಿಷೇಧಾಜ್ಞೆ ನಡುವೆಯೂ ರೈತರು ಹೋರಾಟ ನಡೆಸಿದ್ದು, ಮಲ್ಲಸಂದ್ರದ ಸಮೀಪವಿರುವ ಕಳ್ಳಿಪಾಳ್ಯ ಗೇಟ್ ಬಳಿ ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಕೆಎಸ್ಸಾರ್ಟಿಸಿ ಬಸ್‌ನ ಟೈರ್ ಗಾಳಿ ಬಿಟ್ಟು ಪ್ರತಿಭಟನೆ ನಡೆಸಿದ ನೂರಾರು ರೈತರು ಸರ್ಕಾರ ಹಾಗೂ ಜಿಲ್ಲಾಡಳಿತದ ಕ್ರಮದ ವಿರುದ್ಧ ಧಿಕ್ಕಾರ ಕೂಗಿದರು.

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಿದೆ. ಶಾಂತಿ ರೀತಿಯಲ್ಲಿ ಹೋರಾಟ ಮಾಡಲು ನಾವೆಲ್ಲಾ ಬಂದಿದ್ದೇವೆ. ಆದರೆ ಪೊಲೀಸರು ಬ್ರಿಟೀಷರಂತೆ ವರ್ತಿಸುತ್ತಾ ಹೋರಾಟಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡ ದಿಲೀಪ್‌ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಯೋಜನೆಯಿಂದ 300 ಕೋಟಿ ಕಿಕ್‌ಬ್ಯಾಗ್ ಬರುತ್ತದೆ. ಹಾಗಾಗಿ ಅವರು ಈ ಯೋಜನೆಯನ್ನು ಮಾಡಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ. ಇದರಿಂದ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗುವುದರ ಬಗ್ಗೆ ಇವರು ಗಮನ ಹರಿಸುತ್ತಿಲ್ಲ. ಈ ಕುರಿತು ಲೋಕಾಯುಕ್ತರು ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.


