ಸ್ಥಳೀಯ ಸಂಸ್ಥೆಗಳಿಗೆ ಕಾಲ-ಕಾಲಕ್ಕೆ ಚುನಾವಣೆಗಳು ನಡೆದಾಗ ಮಾತ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ ತಿಳಿಸಿದರು.
ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ 5ನೇ ರಾಜ್ಯ ಹಣಕಾಸು ಆಯೋಗದ ವಿಷಯಗಳ ಕುರಿತು ತುಮಕೂರು ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡುವ ಸಂದರ್ಭದಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ನಿರ್ಮಾಣ, ವಿದ್ಯುತ್ ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
‘ತೆರಿಗೆ ಮೊದಲು-ಸೇವೆ ನಂತರ’ ಎಂಬ ಧ್ಯೇಯವಾಕ್ಯದಡಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿ ಸರ್ಕಾರದ ಸೇವೆಗಳನ್ನು ಪಡೆಯಬೇಕೆಂಬ ಸಂದೇಶವನ್ನು ಜನರಿಗೆ ಮುಟ್ಟಿಸಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಮಾಡುವ ಮೂಲಕ ಸ್ಥಳೀಯವಾಗಿ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಸಂಗ್ರಹವಾದ ಆರ್ಥಿಕ ಸಂಪನ್ಮೂಲವನ್ನು ಕ್ರೂಢೀಕರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಬೇಕು. ತೆರಿಗೆ ನಿರ್ಧರಣೆ, ವಸೂಲಾತಿ, ವಿನಾಯಿತಿ ಹಾಗೂ ತೆರಿಗೆ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಪಡೆದ ಸಲಹೆಗಳನ್ನು ಅಂತಿಮ ವರದಿಯಲ್ಲಿ ದಾಖಲಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿ.ಪಂ. ಸಿಇಒ ಜಿ. ಪ್ರಭು ಮಾತನಾಡಿ, ಗ್ರಾಮ ಪಂಚಾಯತಿಗಳ ಆದಾಯ ಹೆಚ್ಚಿಸಲು ತೆರಿಗೆ ವಸೂಲಾತಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಆನ್‌ಲೈನ್ ಸೇವೆಗಳಿಂದ ತೆರಿಗೆ ವಸೂಲಾತಿ ಪಾರದರ್ಶಕವಾಗಿ ನಡೆಯುತ್ತಿದೆ. ತೆರಿಗೆ ವಸೂಲಾತಿಯನ್ನು ಪಂಚತAತ್ರ 2.0 ತಂತ್ರಾAಶದಲ್ಲಿ ಅನುಷ್ಟಾನಗೊಳಿಸುತ್ತಿರುವುದರಿಂದ ತೆರಿಗೆ ಲೆಕ್ಕಾಚಾರ ಸರಳಗೊಂಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿ ಶುಭ ಕಲ್ಯಾಣ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಆಯೋಗದ ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್. ಪೋಂಡೆ, ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್, ಸಮಾಲೋಚಕ ಎಂ.ಕೆ. ಕೆಂಪೇಗೌಡ ಹಾಗೂ ಜಿ. ಸುಪ್ರಸನ್ನ, ಅಧ್ಯಕ್ಷರ ಆಪ್ತಕಾರ್ಯದರ್ಶಿ ಯಾಲಕ್ಕಿಗೌಡ ಹಾಜರಿದ್ದರು.