Friday, September 20, 2024
Google search engine
Homeಮುಖಪುಟಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ಘೋಷಿಸಲು ಆಗ್ರಹ

ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ಘೋಷಿಸಲು ಆಗ್ರಹ

ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಬೇಕು. ರಾಜ್ಯ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ 5 ಸಾವಿರ ರೂ ಪ್ರೋತ್ಸಾಹ ದನ ನೀಡಬೇಕೆಂದು ಆಗ್ರಹಿಸಿ ಅಕ್ಟೋಬರ್ 3 ರಂದು ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟದ ಸಂಚಾಲಕ ಸಿ.ಯತಿರಾಜು ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟಕ್ಕೆ ಒಳಗಾದರೆ, ಇನ್ನೊಂದೆಡೆ ಪ್ರಭುತ್ವದ ನೀತಿಗಳಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಒಕ್ಕೂಟ ಸರ್ಕಾರ ತೈಲ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಸುಂಕದಲ್ಲಿ ಮಲೇಶಿಯಾ, ಇಂಡೋನೆಷಿಯಾ, ಸೌಧಿ, ಥಾಯ್‌ಲ್ಯಾಂಡ್ ಮುಂತಾದ ಕಡೆಗಳಿಂದ ಅಮದು ಮಾಡಿಕೊಳ್ಳುತ್ತಿರುವ ಪರಿಣಾಮ ದೇಶದ ಕೊಬ್ಬರಿಯನ್ನು ಕೇಳುವವರೆ ಇಲ್ಲದಂತಾಗಿದೆ.ಸರ್ಕಾರ ತನ್ನ ನೀತಿಗಳಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕುಸಿದಿರುವ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಹಲವಾರು ಹಂತದ ಹೋರಾಗಳನ್ನು ಕೊಬ್ಬರಿ ಬೆಳೆಯುವ ಸುಮಾರು 15 ಜಿಲ್ಲೆಗಳಲ್ಲಿ ರೈತರ ಸಂಘ ಮಾಡಿದೆ.ಸಂಸದರು ಶಾಸಕರಿಗೆ ಮನವಿ, ಜನಪ್ರತಿನಿಧಿಗಳ ಮನೆ ಮುಂದೆ ಧರಣಿ, ಪಾದಯಾತ್ರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರಭುತ್ವದ ಗಮನ ಸೆಳೆಯಲು ಅಕ್ಟೋಬರ್ 3 ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ.

ಕೃಷಿ ಬೆಲೆ ನಿಗಧಿ ಆಯೋಗ ನೀಡಿದ 16760 ರೂ ಬೆಂಬಲ ಬೆಲೆಯನ್ನು ಕಡೆಗಣಿಸಿ ಕೇಂದ್ರ ಸರ್ಕಾರ ಕೇವಲ 11,750 ರೂ ನಿಗದಿ ಪಡಿಸಿದೆ. ರಾಜ್ಯ ಸರ್ಕಾರ ಕೇವಲ 1250 ರೂ ಮಾತ್ರ ಪ್ರೋತ್ಸಾಹ ಧನ ನೀಡಿ, ರೈತರನ್ನು ಕಡೆಗಣಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ ಬೆಂಬಲ ಬೆಲೆ ನೀಡಬೇಕು. ರಾಜ್ಯ ಸರ್ಕಾರ 5 ಸಾವಿರ ರೂ ಪ್ರೋತ್ಸಾಹ ಧನ ನೀಡಿದರೆ ಅನುಕೂಲವಾಗಲಿದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಎಐಕೆಕೆಎಂಎಸನ ಎಚ್.ಪಿ.ಶಿವಪ್ರಕಾಶ್, ಕೆ.ಆರ್.ಆರ್.ಎಸ್‌ನ ಸಿದ್ದವೀರಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಎಐಕೆಕೆಎಂಎಸ್‌ನ ಎಸ್.ಎನ್.ಸ್ವಾಮಿ, ಎಐಕೆಎಸ್ ನ ಗಿರೀಶ್, ಕೆ.ಆರ್.ಆರ್.ಎಸ್‌ನ ಶಂಕರಪ್ಪ. ಜಿ, ಅಜಪ್ಪ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular