Friday, September 20, 2024
Google search engine
Homeಮುಖಪುಟಶೋಷಿತರಿಗೆ ಅವಕಾಶ ನೀಡಬೇಕು - ಲೇಖಕಿ ದು.ಸರಸ್ವತಿ

ಶೋಷಿತರಿಗೆ ಅವಕಾಶ ನೀಡಬೇಕು – ಲೇಖಕಿ ದು.ಸರಸ್ವತಿ

ಹಿಂದೆ ವೇಷಭೂಷಣಗಳಿಂದಲೇ ಇವರು ದಲಿತರು ಎಂಬುದನ್ನು ಗುರುತಿಸುತ್ತಿದ್ದರು. ಆ ಕಾರಣಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಹಳೆಯ ವೇಷಭೂಷಣಗಳನ್ನು ಬಿಟ್ಟು ಶುಚಿತ್ವವುಳ್ಳ ಬಟ್ಟೆಗಳನ್ನು ಧರಿಸಬೇಕೆಂದು ಶೋಷಿತ ಮಹಿಳೆಯರಿಗೆ ಹೇಳುತ್ತಿದ್ದರು ಎಂದು ಲೇಖಕಿ ದು.ಸರಸ್ವತಿ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ, ವಿಚಾರ ಮಂಟಪ, ಸಾಕ್ಷಿ ಪ್ರಕಾಶನ ತುಮಕೂರು ವತಿಯಿಂದ ನಗರದ ಸಾವಿತ್ರಿ ಓಶೋ ಧ್ಯಾನಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಓದು ಬಳಗ, ಪುಸ್ತಕ ಓದು, ಚರ್ಚೆ, ಕವಿಗೋಷ್ಠಿ, ಸಂವಾದಗಳ ಸರಣಿ ಕಾರ್ಯಕ್ರಮದಲ್ಲಿ ‘ನಾವೂ ಇತಿಹಾಸ ಕಟ್ಟಿದೆವು’ ಕೃತಿಯ ಕುರಿತು ಸಂವಾದದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಲು ಅಂಬೇಡ್ಕರ್ ಹಿಂದೂ ಧರ್ಮದ ಒಳಗೆ ಕೆಲವೊಂದು ಬದಲಾವಣೆ ತರಲು ಯತ್ನಿಸಿದರು. ಕೆರೆಯ ನೀರನ್ನು ಮುಟ್ಟುವುದು, ಅಂತರ್ ಜಾತಿ ವಿವಾಹ ಉತ್ತೇಜಿಸುವುದಕ್ಕೆ ಯತ್ನಿಸಿದರು. ದೇವಾಲಯಗಳಿಗೆ ಪ್ರವೇಶ ಮಾಡುವ ಚಳವಳಿ ರೂಪಿಸಿದರು. ಇದರಿಂದ ಹಲವು ಬದಲಾವಣೆಗಳಾದವು ಎಂದು ಹೇಳಿದರು.

ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಶೋಷಿತ ಸಮುದಾಯದ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣಕ್ಕೆ ಮಹತ್ವ ನೀಡಬೇಕು. ಓದಿನಿಂದ ಅರಿವನ್ನು ಮೂಡಿಸಿಕೊಳ್ಳುವಂತೆ ಶೋಷಿತ ಸಮುದಾಯಕ್ಕೆ ಅಂಬೇಡ್ಕರ್ ಕರೆ ನೀಡಿದರು.

ಪ್ರಜಾಪ್ರಭುತ್ವವೇ ರಕ್ತ ಕ್ರಾಂತಿಯಿಲ್ಲದೆ ಬದಲಾವಣೆ ತರುವಂತಹ ಕೆಲಸ ಆಗುತ್ತದೆ. ಅದೇ ಕಾರಣಕ್ಕೆ ಬಂಧುತ್ವದ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ದಾಖಲಿಸಿದರು. ಇದು ಬುದ್ದತ್ವದ ಕಲ್ಪನೆಯಾಗಿದೆ. ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕೊಟ್ಟುಬಿಟ್ಟರೆ, ನಾನು ನೀನು ಎಂಬ ಬೇಧಭಾವ ಮಾಡಿದರೆ ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವಕ್ಕೆ ಎಲ್ಲಿ ಅರ್ಥ ಬರುತ್ತದೆ ಎಂದರು.

ಕೆರೆ ನೀರನ್ನು ಮುಟ್ಟುವುದು ಮತ್ತು ದೇವಸ್ಥಾನ ಪ್ರವೇಶಿಸುವುದು ನಾಗರಿಕ ಹಕ್ಕು ಎಂದು ಭಾವಿಸಲಾಗಿತ್ತು. ನಾವು ಈ ದೇಶದ ಪ್ರಜೆಗಳು ಹೀಗಾಗಿ ಎಲ್ಲಾ ದೇವಾಲಯಗಳು ನಮಗೆ ಬಾಗಿಲು ತೆರೆದಿರಬೇಕು. ಯಾವುದೇ ಸಾರ್ವಜನಿಕ ಸ್ಥಳ ನಮಗೆ ಮುಕ್ತವಾಗಿರಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ತುಂಬಾ ಭಾವುಕ ಜೀವಿ. ತುಂಬಾ ಹೆಂಗರುಳುಳ್ಳ ವ್ಯಕ್ತಿಯಾಗಿದ್ದರು. ಅಂಬೇಡ್ಕರ್ ಶೂಟ್ ಇಲ್ಲದೆ ಹೊರಗೆ ಹೋಗುತ್ತಿರಲಿಲ್ಲ. ಗಾಂಧೀಜಿ ಸರಳ ಉಡುಪುಗಳನ್ನು ಧರಿಸಿ ತ್ಯಾಗ ಮಾಡಿದರು. ಇದು ನಮಗೆ ಇಂದು ಮುಖ್ಯವಾಗಿದೆ. ಆದರೂ ಸಮಾಜದಲ್ಲಿ ಇಂದಿಗೂ ಏಣಿಶ್ರೇಣಿ ವ್ಯವಸ್ಥೆ ಮುಂದುವರೆದಿದೆ ಎಂದು ವಿಷಾದಿಸಿದರು.

ತಾರತಮ್ಯ ಇರುವುದರಿಂದ ಅವಕಾಶಗಳನ್ನು ಕಳೆದುಕೊಂಡಿರುವ ಸಮುದಾಯಕ್ಕೆ ಅವಕಾಶಗಳು ನೀಡಬೇಕು. ಎಲ್ಲರಿಗೂ ಓದುವ ಅವಕಾಶ, ಎಲ್ಲರಿಗೂ ಆರೋಗ್ಯ ಕಾಪಾಡಿಕೊಳ್ಳುವ ಅವಕಾಶ, ಎಲ್ಲರಿಗೂ ಬೇಸಿಕ್ ಆಗಿರುವ ಮೂಲಭೂತ ಅವಕಾಶಗಳು ಸಿಗಬೇಕು. ಆಗ ಮಾತ್ರ ನಮಗೆ ಸ್ವಾತಂತ್ರ್ಯ ಲಭಿಸುತ್ತದೆ ಎಂದರು.

ಇಂದಿಗೂ ಶಾಲೆ ದೂರ ಅನ್ನುವ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಲಾಗುತ್ತಿದೆ. ಹೆಣ್ಣು ಮಕ್ಕಳು ಹತ್ತನೇ ತರಗತಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೇಲುಗೈ ಎಂದು ಹೆಡ್ಡಿಂಗ್‌ಗಳು ಬರುತ್ತವೆ. ಆದರೆ ನಂತರ ಆ ಹೆಣ್ಣು ಮಕ್ಕಳು ಏನಾದರು ಎಂಬ ಮಾಹಿತಿಯೇ ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೇಖಕಿ ಓದು ಬಳಗದ ಡಾ.ಆಶಾರಾಣಿ ಬಗ್ಗನಡು ಸ್ವಾಗತಿಸಿದರು. ಸಂವಾದದಲ್ಲಿ ಡಾ.ಅರುಂಧತಿ, ಕಲ್ಯಾಣಿ, ಗೀತಾಲಕ್ಷಿ ವಾಣಿ ಸತೀಶ್, ಎಚ್.ಆರ್.ರೇಣುಕಾ, ರಾಣಿ ಚಂದ್ರಶೇಖರ್, ಅರುಣ್, ನವೀನ್ ಕುಮಾರ್, ಚೇತನ, ಪ್ರಾಧ್ಯಾಪಕಿ ಗೀತಾ ವಸಂತ, ಲತಾ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular