ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಮಳೆ ಬಾರದೆ ಕಡಲೆಗಿಡಗಳು ಬಾಡಿ ಹೋಗುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಇರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.
ಈ ಬಾರಿ ಆರಂಭದಲ್ಲಿ ಮಳೆ ಚನ್ನಾಗಿ ಬಂದಿದ್ದರಿಂದ ರೈತರು ಕಡಲೆ ಬೀಜ ಬಿತ್ತನೆ ಮಾಡಿದ್ದರು. ಕಾಲ ಕಾಲಕ್ಕೆ ಮಳೆಯಾಗಿ ಕಡಲೆ ಗಿಡಗಳು ಚನ್ನಾಗಿ ಬೆಳೆದವು. ಹೂ ತುಂಬಿಕೊಂಡು ಹೂಡು ಇಳಿಯಿತು. ಕಡಲೆಕಾಯಿಯೂ ಗಿಡಕ್ಕೆ 20 ರಿಂದ 25 ಕಾಯಿ ಬಿಡಲಾರಂಭಿಸಿತು.
ಆದರೆ ಈಗ ಕಾಯಿ ಗಟ್ಟಿಯಾಗಬೇಕಾದ ಸಂದರ್ಭದಲ್ಲಿ ಮಳೆ ಕೈಕೊಟ್ಟಿದೆ. ಹೀಗಾಗಿ ಕಡಲೆಕಾಯಿ ಗಟ್ಟಿಯಾಗದೆ ಜೊಳ್ಳು ಬರಲಿದೆ. ಇದರಿಂದ ಬೀಜಕ್ಕೂ ಬಾರದಂತೆ ಆಗಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ.
ಈಗ ಮಳೆ ಬರಬೇಕಾಗಿತ್ತು. ಬಂದಿಲ್ಲ. ಕಡಲೆಕಾಯಿ ಗಟ್ಟಿಯಾಗುವ ಸಂದರ್ಭದಲ್ಲಿ ಮಳೆ ಕೈ ಕೊಟ್ಟಿದೆ. ಇದರಿಂದ ಕಾಯಿ ಜೊಳ್ಳಾಗಲಿದೆ. ಈಗ ಮಳೆ ಬಂದಿದ್ದರೆ ಕಡಲೆಕಾಯಿ ಇಳುವಳಿ ಜಾಸ್ತಿ ಬರುತ್ತಿತ್ತು. ಆದರೆ ಮಳೆ ಇಲ್ಲದೆ ಬೆಳೆ ಕೈಗೆ ಬರುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.
ಈಗ ಮಳೆ ಬಾರದಿದ್ದರೆ ಕಡಲೆಗಿಡಳನ್ನು ಕೀಳಲು ಕಷ್ಟವಾಗುತ್ತದೆ. ಕಾಯಿಯೆಲ್ಲ ಮಣ್ಣು ಪಾಲಾಗುತ್ತಿದೆ. ಕಾಯಿ ಗಟ್ಟಿಯಾಗುವ ಕಾಲಕ್ಕೆ ಮಳೆ ಬಂದಿದ್ದರೆ ನಮಗೂ ಬೆಳೆ ಕೈಗೆ ಬರುತ್ತಿತ್ತು. ಈಗ ಅಧೂ ಇಲ್ಲದಂತಾಗಿದೆ ಎಂದು ಪಾವಗಡ ತಾಲೂಕಿನ ಕೃಷ್ಣಗಿರಿಯ ಮುದ್ದಪ್ಪನ ಮಗ ನರಸಿಂಹಮೂರ್ತಿ ಹೇಳುತ್ತಾರೆ.