ದಲಿತರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ದಲಿತರ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮಾನವ ಸರಪಳಿ ನಿರ್ಮಿಸಿದ ದಲಿತ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಮುನಿರತ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕುಣಿಗಲ್ ಪ್ರವಾಸಿ ಮಂದಿರದಿಂದ ಶಾಸಕ ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ನೂರಾರು ಕಾರ್ಯಕರ್ತರು ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಮಾನವ ಸರಪಳಿ ನಡೆಸಿ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಶಾಸಕ ಮುನಿರತ್ನ ಅಸಭ್ಯ ವರ್ತನೆಯನ್ನ ರಾಜ್ಯದ ಶಾಸಕರು ಖಂಡಿಸದಿರುವುದು ದುರದೃಷ್ಟಕರ, ದಲಿತರ ಹಾಗೂ ಒಕ್ಕಲಿಗರ ಹೆಣ್ಣು ಮಕ್ಕಳ ವಿರುದ್ಧ ಮಾತನಾಡಿರುವ ಆಡಿಯೋ ಹೊರ ಬೀಳುತ್ತಿದ್ದಂತೆ ರಾಜ್ಯದ ಶಾಸಕರು ಪ್ರತಿಕ್ರಿಯೆ ನೀಡಬೇಕಿತ್ತು. ಆದರೆ ಅವರನ್ನೇ ಬೆಂಬಲಿಸುತ್ತಿರುವುದು ಖಂಡನಿಯ ಎಂದರು.
ಶಾಸಕ ಮುನಿರತ್ನ ಒಬ್ಬ ಲಂಚಕೋರ ಎನ್ನುವುದಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಸಾಕ್ಷಿ, ಈತ ದಲಿತ ವಿರೋಧಿ ಎಂಬುದಕ್ಕೆ ದಲಿತರನ್ನ ಜಾತಿ ಹಿಡಿದು ಮಾತನಾಡಿರುವ ಆಡಿಯೋ ಸಾಕ್ಷಿ, ಮಹಿಳಾ ವಿರೋಧಿ ಎನ್ನುವುದಕ್ಕೆ ಒಕ್ಕಲಿಗ ಮಹಿಳೆಯರನ್ನು ಅಶ್ಲೀಲವಾಗಿ ಅಸಂಬದ್ಧವಾಗಿ ಮಾತನಾಡಿರುವ ವಿಡಿಯೋ ಸಾಕ್ಷಿ, ಇಂತಹ ಹೇಳಿಕೆಗಳನ್ನು ಬಿಜೆಪಿಯ ನಾಯಕರು, ಸಂಸದರು, ಶಾಸಕರು ಖಂಡಿಸದೆ ಮುನಿರತ್ನ ವಿರುದ್ದ ಕ್ರಮ ಕೈಗೊಳ್ಳದೆ ಸಮರ್ಥಿಸಿಕೊಳ್ಳುತ್ತಿರುವುದನ್ನ ನೋಡಿದರೆ ಬಿಜೆಪಿ ಪಕ್ಕ ದಲಿತ ವಿರೋಧಿ ಪಕ್ಷ ಎಂದು ಆರೋಪಿಸಿದರು.
ರಾಜ್ಯದ ಎಲ್ಲಾ ಜಾತಿಯ ಜನರ ಓಟು ಪಡೆದು ಒಕ್ಕಲಿಗರ ಮಹಾ ನಾಯಕರು ಎಂದು ಕರೆಸಿಕೊಳ್ಳುವ ಕೇಂದ್ರ ಸಚಿವ ಕುಮಾರಸ್ವಾಮಿ, ಶಾಸಕ ಅಶೋಕ್, ಸಿ.ಟಿ. ರವಿ ಹಾಗೂ ಬಿಜೆಪಿಯ ಮಹಾನ್ ನಾಯಕರುಗಳು ಶಾಸಕನ ಅವಹೇಳನಕಾರಿ ಮಾತುಗಳನ್ನ ಖಂಡಿಸುವಲ್ಲಿ, ಶಿಸ್ತು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ದೇಶವನ್ನು ಸ್ವಚ್ಛ ಭಾರತ್ ಮಾಡಲು ಹೊರಟ ಕೇಂದ್ರ ಬಿಜೆಪಿ ನಾಯಕರು ಮೊದಲು ಹೊಲಸು ತುಂಬಿರುವ ಇಂಥ ಶಾಸಕನ ಮನಸ್ಸು ಮತ್ತು ದೇಹವನ್ನು ಸ್ವಚ್ಛಗೊಳಿಸಲಿ ಎಂದರು. ಕಾಂಗ್ರೆಸ್ ಶಾಸಕರು ಶಾಸಕ ಮುನಿರತ್ನ ವಿರುದ್ಧ ತುಟಿ ಬಿಚ್ಚದೆ, ಧ್ವನಿ ಎತ್ತದಿರುವುದುನ್ನ ಗಮನಿಸಿದರೆ ಶಾಸಕನ ದೌರ್ಜನ್ಯದ ಮಾತುಗಳಿಗೆ ಸಹಮತವಿದೆ ಎಂಬ ಅಭಿಪ್ರಾಯಕ್ಕೆ ಬರಬೇಕಾಗಿದೆ, ಇನ್ನಾದರೂ ತಮ್ಮ ಧ್ವನಿ ಬಿಚ್ಚಿ ನೊಂದವರ ಮತ್ತು ನ್ಯಾಯದ ಪರವಾಗಿರುವುದನ್ನ ಕಲಿಯಿರಿ ಎಂದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳಾದ ಗೌಡಗೆರೆ ವರದರಾಜು, ರಾಮಚಂದ್ರಯ್ಯ, ವಿ.ಶಿವಶಂಕರ್, ಎಸ್.ಆರ್. ಚಿಕ್ಕಣ್ಣ, ದಲಿತ್ ನಾರಾಯಣ್, ರಾಜಣ್ಣ, ಜಿ.ಕೆ. ನಾಗಣ್ಣ, ನರಸಿಂಹ ಪ್ರಸಾದ್, ಭಕ್ತರಹಳ್ಳಿ ಕುಮಾರ್, ರಾಮಲಿಂಗಯ್ಯ, ಕೃಷ್ಣರಾಜು, ಧನರಾಜ್, ನಗುತಾ ರಂಗನಾಥ, ಶ್ರೀನಿವಾಸ್, ರಾಮಕೃಷ್ಣ, ರಾಜು ವೆಂಕಟಪ್ಪ, ಆನಂದ್, ಚೆನ್ನಯ್ಯ, ನರಸಿಂಹಮೂರ್ತಿ, ತಿಪ್ಪೂರು ಚಂದ್ರ ,ವೆಂಕಟೇಶ್, ಹಟ್ಟಿ ರಂಗಯ್ಯ, ನಂಜಪ್ಪ, ರಾಮಸ್ವಾಮಿ, ರಾಜಶೇಖರ್, ಸಿದ್ದರಾಜು ಸೇರಿದಂತೆ ಹಲವರು ಹಾಜರಿದ್ದರು.