ತೆಲಂಗಾಣದಲ್ಲಿ ರೈತರು ಬೆಳೆಯುವ ಭತ್ತವನ್ನು ಖರೀದಿಸುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಆಡಳಿತಾರೂಢ ಟಿಆರ್.ಎಸ್ ರಾಜ್ಯಾದ್ಯಂತ ಶುಕ್ರವಾರ ಮೂರು ಗಂಟೆಗಳ ಧರಣಿ ನಡೆಸಲಿದೆ.
ಧರಣಿಯಲ್ಲಿ ಸಚಿವರು, ಶಾಸಕರು, ಎಂಎಲ್ಸಿಗಳು, ಸಂಸದರು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಧರಣಿ ನಡೆಸಲಿದ್ದಾರೆ.
ತೆಲಂಗಾಣದಿಂದ ಭತ್ತ ಖರೀಸಲು ಕೇಂದ್ರ ವಿಫಲವಾದಲ್ಲಿ ಟಿಆರ್.ಎಸ್ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ದೆಹಲಿಯಲ್ಲಿ ಧರಣಿ ನಡೆಸಲಿದ್ದಾರೆ ಎಂದು ಟಿಆರ್.ಎಸ್. ಮುಖಂಡರು ತಿಳಿಸಿದ್ದಾರೆ.
ಜಿಎಚ್.ಎಂ.ಸಿ ವ್ಯಾಪ್ತಿಯ ಸಚಿವರು, ಶಾಸಕರು, ಎಂಎಲ್.ಸಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಇಂದಿರಾ ಪಾರ್ಕ್ ಬಳಿಯ ಧರಣಾ ಚೌಕ್ ನಲ್ಲಿ ಧರಣಿ ನಡೆಸಲಿದ್ದಾರೆ. ಕೇಂದ್ರ ಭತ್ತ ಖರೀದಿ ಮಾಡಲು ಒಪ್ಪಿಗೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ.
ಬಿಜೆಪಿ ನಿನ್ನೆ ಧರಣಿ ನಡೆಸಿತ್ತು. ಇದಕ್ಕೆ ಟಿಆರ್.ಎಸ್ ತಿರುಗೇಟು ನೀಡಿದ್ದು ಬಿಜೆಪಿ ಧರಣಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಹೊರತು ಪಡಿಸಿ ಬೇರೆ ಯಾರೂ ಇರಲಿಲ್ಲ ಎಂದು ವ್ಯಂಗ್ಯವಾಡಿದೆ.
ತೆಲಂಗಾಣದಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ ನಾಟಕಗಳನ್ನು ನಿಲ್ಲಿಸುವಂತೆ ಹಣಕಾಸು ಸಚಿವ ಹರೀಶ್ ರಾವ್ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಭತ್ತ ಸಂಗ್ರಹದ ಕುರಿತು ಯಾವುದೇ ಮಾಹಿತಿ ನೀಡದಿದ್ದರೂ ಕೆಸಿಆರ್ ಎಲ್ಲಾ ಜಿಲ್ಲೆಗಳ 6500ಕ್ಕೂ ಹೆಚ್ಚು ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಸ್ವಂತವಾಗಿ ಭತ್ತ ಖರೀದಿ ಆರಂಭಿಸಿದ್ದಾರೆ ಎಂದರು.