Saturday, October 19, 2024
Google search engine
Homeಮುಖಪುಟಇಲಿ ಹೋಗಿ ಹುಲಿಯಾದ ಕತೆ

ಇಲಿ ಹೋಗಿ ಹುಲಿಯಾದ ಕತೆ

ಅದೊಂದು ಹೆದ್ದಾರಿ, ರಾತ್ರಿ ಸುಮಾರು 8ಗಂಟೆ ಸಮಯ. ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳ ಓಡಾಟವೂ ಇತ್ತು. ಪಶ್ಚಿಮದಿಂದ ಬರುತ್ತಿದ್ದ ಯುವಕನ ಬೈಕ್ ಕೆಟ್ಟುಹೋಯಿತು. ರಸ್ತೆ ಬದಿಯಲ್ಲೇ ನಿಲ್ಲಿಸಿ ಸ್ನೇಹಿತನಿಗೆ ಪೋನ್ ಮಾಡಿದ. ಸ್ವಲ್ಪ ಸಮಯವಾದ ಮೇಲೆ ಸ್ನೇಹಿತ ತನ್ನ ಬೈಕ್ ನಲ್ಲಿ ಬಂದ. ಕೆಟ್ಟಿದ್ದ ಬೈಕ್ ಮೇಲೆ ಹತ್ತಿ ಕುಳಿತಾಗ ಸ್ನೇಹಿತ ತನ್ನ ಬೈಕ್ ಸ್ಟ್ರಾಟ್ ಮಾಡಿ ಒಂದು ಕಾಲನ್ನು ಕೆಟ್ಟ ಬೈಕ್ ಹಿಂಭಾಗಕ್ಕೆ ಇಟ್ಟು ತಳ್ಳುತ್ತಾ ಬರುತ್ತಿದ್ದ. ಕತ್ತಲಾದರೂ ಬೆಳಕೂ ಇತ್ತು. ಸುತ್ತಮುತ್ತಲೂ ಕಣ್ಣುಗಳು ಈ ದೃಶ್ಯ ನೋಡುತ್ತಲೇ ಇದ್ದವು. ಕೆಲವು ಕಣ್ಣುಗಳು ಆ ಎರಡು ಬೈಕ್ ಸವಾರರ ಕಸರತ್ತು ನೋಡಿ ಮರುಗಿದವು. ಕೆಲ ಕಣ್ಣುಗಳು ನಕ್ಕವು.

ಇದ್ಯಾವುದನ್ನೂ ಗಮನಿಸದೆ ತಾವು ತಲುಪಬೇಕಿದ್ದ ಸ್ಥಳಕ್ಕೆ ಹೋಗಲು ಆ ಇಬ್ಬರು ಬೈಕ್ ಸವಾರರು ಪ್ರಯತ್ನಿಸುತ್ತಿದ್ದರು. ಕೆಟ್ಟ ಬೈಕ್ ಮೇಲೆ ಕುಳಿತಿದ್ದ ವ್ಯಕ್ತಿ ಸ್ನೇಹಿತನಿಗೆ ಹೇಳಿದರು. ಸ್ವಲ್ಪ ಜೋರಾಗಿ ತಳ್ಳು ಬೇಗ ಹೋಗೋಣ ಅಂದು. ರಸ್ತೆಯ ಬದಿಯಿಂದ ಸ್ವಲ್ಪ ನಡುರಸ್ತೆ ಭಾಗದಲ್ಲಿ ಆ ಇಬ್ಬರು ಸವಾರರು ಬೈಕ್ ಮನೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದರು. ವಾಹನಗಳ ಓಡಾಟ ಎಂದಿನಂತೆಯೇ ಇತ್ತು. ವಾಹನಗಳೂ ದೀಪಗಳನ್ನು ಬೆಳಗಿಕೊಂಡು ಹೋಗುತ್ತಲೇ ಇದ್ದವು.

ಆಗ ದಿಢೀರನೇ ಹಿಂದಿನಿಂದ ದೊಡ್ಡ ರೀತಿಯ ಹಾರನ್ ಕೇಳಿಸಿತು. ನಿರಂತರವಾಗಿಯೇ ಹಾರನ್ ಮಾಡಿದ್ದ ಹಿಂದಿನ ವಾಹನದ ಚಾಲಕ. ಇದರಿಂದ ಗಲಿಬಿಲಿಯಾಗಿ ಬೈಕ್ ಗಳನ್ನು ರಸ್ತೆಯ ಪಕ್ಕಕ್ಕೆ ತೆಗೆದುಕೊಳ್ಳಲು ಸ್ವಲ್ಪ ತಡವಾಯಿತು. ಹಿಂದಿನ ವಾಹನದಲ್ಲಿ ಕುಳಿತಿದ್ದವರು ಕೆಳಗೆ ಇಳಿದು ಬಂದರು. ಬೈಕ್ ಕೆಟ್ಟಿದೆ. ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರೂ ಕೇಳಿಸಿಕೊಳ್ಳದ ಹಿಂದಿನ ವಾಹನದಲ್ಲಿದ್ದವರು ಆ ಇಬ್ಬರು ಬೈಕ್ ಸವಾರರನ್ನು ಬಾಯಿಗೆ ಬಂದಂತೆ ಬೈದರು. ಬೈಕ್ ಸವಾರರು ಕೆರಳುವಂತೆ ಮಾಡುವಲ್ಲಿ ಯಶಸ್ವಿಯೂ ಆದರು.

ಕೆರಳಿದ ಬೈಕ್ ಸವಾರರು ತಾವೂ ಬೈಯ್ಯಲು ಶುರು ಮಾಡಿದರು. ಇಬ್ಬರ ನಡುವೆ ಗಲಾಟೆಯೂ ನಡೆಯಿತು. ಇಬ್ಬರ ಕಡೆಯೂ ಹೊಡೆತಗಳು ಬಿದ್ದವು. ಕಾರಿನಲ್ಲಿದ್ದ ಒಬ್ಬನಿಗೆ ತಲೆಗೆ ಸಣ್ಣ ಪೆಟ್ಟೂ ಆಯಿತು. ಸರಿ ಕಾರು ಅಲ್ಲಿಂದ ಬಂತು. ಕಾರಿನಲ್ಲಿದ್ದವರ ಜೊತೆ ಇನ್ನೂ ಕೆಲವರು ಸೇರಿಕೊಂಡು ಸಭೆ ನಡೆಸಿದರು. ತಮ್ಮ ಧರ್ಮದ ಮುಖಂಡರಿಗೂ ವಿಷಯ ತಲುಪಿತು. ಸಣ್ಣದೊಂದು ಘಟನೆ ಇಲಿ-ಹುಲಿಯ ಕತೆಯಾಯಿತು. ಸುದ್ದಿಗೆ ರೆಕ್ಕೆಪುಕ್ಕಗಳು ಬಂದವು. ಗಾಳಿಯಲ್ಲಿ ತೇಲುತ್ತಾ ಇಡೀ ಊರಿಗೇ ಗಾಳಿ ಸುದ್ದಿ ಸುಯ್ಯನೆ ಹರಡಿತು.

ಬೈಕ್ ಸವಾರರ ಮತ್ತು ಹಿಂಬದಿ ವಾಹನದ ನಡುವಿನ ಜಗಳ ಊರಿನ ಜಗಳವೇ ಆಗಿ ಮಾರ್ಪಟ್ಟಿತು. ಯಾವುದ್ಯಾವುದೋ ಸುದ್ದಿ ಚರ್ಚೆಗೆ ಬಂತು. ಅಬ್ಬಾ ಕೆಟ್ಟ ಬೈಕ್ ಸವಾರನ ಕಡೆಯವರು ಏನೇನೋ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು. ಅದಕ್ಕೆ ಊರಿನ ಎಲ್ಲರೂ ಒಂದುಗೂಡಬೇಕೆಂಬ ಕಿರುಸುದ್ದಿಗಳು ಎಲ್ಲೆಡೆ ಹರಿದಾಡಿದವು. ಊರಿಗೆ ಊರೇ ಬಾಗಿಲು ಹಾಕಿಸಿದರೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಯಿತು. ಇತೆಂಬೊ ಒಂದು ದಿನ ಇಡೀ ಊರಿನ ಎಲ್ಲಾ ಮನೆಗಳ ಬಾಗಿಲುಮುಚ್ಚಿಸಿ ಕೆಟ್ಟ ಬೈಕ್ ಕಡೆಯವರಿಗೆ ಬುದ್ದಿ ಕಲಿಸಬೇಕೆಂಬ ತೀರ್ಮಾನವೂ ಆಯಿತು.

ನೋಡನೊಡುತ್ತಲೇ ಆ ದಿನವೂ ಬಂತು. ಊರಿನ ಯಜಮಾನರು ಮೀಸೆ ತಿರುವುತ್ತ ಹೇಳಿದರು. ನನ್ನ ಮೀಸೆಯ ಕೆಳಗೇ ಕೆಟ್ಟ ಬೈಕ್ ಕಡೆಯವರು ಜೀವನ ನಡೆಸಬೇಕು. ಇಲ್ಲದಿದ್ದರೆ ಅವರು ಬದುಕುವುದಕ್ಕೂ ಕಷ್ಟವಾಗುತ್ತದೆ ಅಂದ್ರು. ಸರಿ ಊರಿನ ಮನೆ ಮಂದಿಯೆಲ್ಲ ಆ ಇಬ್ಬರು ಬೈಕ್ ಸವಾರರ ಮೇಲೆ ಕ್ರಮ ಕೈಗೊಳ್ಳುವುದು ಬಿಟ್ಟು ಅವರ ಕಡೆಯವರ ವಿರುದ್ಧವೇ ತಿರುಗಿಬಿದ್ದಿದ್ದರು. ಅಥವಾ ಹಾಗೆ ತಿರುಗಿಬೀಳುವಂತೆ ಮಾಡಲಾಗಿತ್ತು. ಮೀಸೆ ಹೊತ್ತ ಗಂಡಸರು ಕೈಯಲ್ಲಿ ಕೋಲು ಹಿಡಿದು ಅಲ್ಲಲ್ಲಿ ಅಡ್ಡಾಡಿದರು. ಮನೆಯಲ್ಲಿದ್ದ ಕೆಲ ಮಹಿಳೆಯರು ಮಾತನಾಡಿಕೊಳ್ಳತೊಡಗಿದರು. ಉಗುರಾಗೋಗುದಕ್ಕೆ ಕೊಡಲಿ ತಂಗಂಡ್ರಲ್ಲ. ಏನ ಗಂಡಸರೋ ಏನೋ? ಅವ್ಕು ಬುದ್ದಿ ಹೇಳಬೌದಿತ್ತು. ಇಲ್ಲ ನ್ಯಾಯಪಂಚಾಯ್ತಿ ಕರದು ಹೀಗೆಲ್ಲಾ ಮಾಡ್ಬೇಡಿ ಅಂಬ್ತ ಹೇಳ್ಬೌದಿತ್ತು. ಇದ್ಯಾಕೆ ಹೀಗ್ ಮಾಡ್ತವೆ ಅಂದ್ಕಂಡು ಮನೆಯ ಕಿಟಕಿಯಿಂದಲೇ ಮಿಕಮಿಕ ನೋಡತೊಡಗಿದರು.

ಮೀಸೆಮಾವ ಹೇಳಿದ ಮೇಲೆ ಬಾಗಿಲು ಹಾಕಲೇಬೇಕಾಯ್ತು. ಕೆಲವರು ಒಳಗೆ ಸಿಟ್ಟಿದ್ರು ತೋರಿಸಿಕೊಳ್ಳದೆ ಬಾಗಿಲು ಮುಚ್ಚಿದರು. ಈ ಸಾಲಿನ ಮನೆಯವರು ಅತ್ಯಂತ ಉತ್ಸಾಹದಿಂದ ಮುಚ್ಚಿ ಮೀಸೆಮಾವನಿಗೆ ಕೃತಜ್ಞತೆ ಅರ್ಪಿಸಿದರು. ಅಲ್ಲೊಬ್ಬ ಇಲ್ಲೊಬ್ಬ ಮನೆಯವರು ಆಯ್ಯೋ ನೀವೇನಾರ ಮಾಡ್ಕಳಿ, ನಮಗೆ ಗಾಳಿ, ಬೆಳಕು ಬೇಕು. ಉಸಿರಾಡಬೇಕು. ಅದೇನೂ ಊರಿನ ಸಮಸ್ಯೆ ಅಲ್ಲ. ಯಾರೊ ಇಬ್ರು ಜಗಳ ಮಾಡ್ಕಂಡಿದ್ದಕ್ಕೆ ಊರಿನ ಮನೆ ಬಾಗಿಲು ಮುಚ್ಚಬೇಕು ಅಂದ್ರೆ ಹೆಂಗಾಗ್ತದೆ. ಕೇವಿಲ್ಲ, ಕೆತಾರ ಇಲ್ಲ. ಊರಿಗೆ ನೀರು, ರಸ್ತೆ, ಮೂಲಭೂತ ಸೌಲಭ್ಯ ಕಲ್ಪಿಸಿ ಅಂತಾ ಬಾಗಿಲು ಮುಚ್ಚಿ ಅಂದಿದ್ರೆ ಅದ್ಕೆ ಒಂದೀಟು ಮರ್ವಾದಿ ಇರೋದು. ಇದ್ಯಾತರ್ದು ಇಂಥ ಗೋಳು. ಮೀಸೆಮಾವನಿಗೂ ಕೆಲಸ ಇಲ್ಲ. ರಸ್ತೆ ಕೆಟ್ಟೋಗವೆ, ನೀರಿಲ್ಲ, ಅದು ಕೇಳಯ್ಯ ಅಂದ್ರೆ ಆ ಮುಠ್ಠಾಳ್ರು ಜಗಳ ಆಡ್ಕಂಡಿದ್ದಕ್ಕೆ ಬಾಗಿಲು ಮುಚ್ಚಿ ಅಂತವೌನಲ್ಲ ಅಂದ್ಕಂಡು ಸುಮ್ಮನಾದ್ರು.

ಅಂತು ಇಬ್ಬರು ಜಗಳದಾಗೆ ನಲುಗಿ ಹೋಗಿತ್ತು. ದ್ವೇಷಕ್ಕೆ ಮತ್ತಷ್ಟು ಪುಷ್ಟಿ ಬಂದಿತ್ತು. ಊರಿನ ಶಾಂತಿ ಕದಡಿತ್ತು. ಸೌಹಾರ್ದತೆಗೆ ಧಕ್ಕೆಯಾಗಿತ್ತು. ಮೀಸೆಮಾವನ ಕಡೆಯವರು ನಗುತ್ತಿದ್ದರು. ಊರಿನ ಜನರ ನಡುವಿನ ಸಹಬಾಳ್ವೆಯ ಬದುಕಿನಲ್ಲಿ ಹಲವು ಅನುಮಾನದ ಬೀಜಗಳು ಬಿತ್ತನೆಯಾಗಿದ್ದವು. ಆದರೂ ಊರು ಶಾಂತ ಸ್ಥಿತಿಗೆ ಮರಳಿತ್ತು. ಹಕ್ಕಿಗಳು ಹಾರಾಡುತ್ತಿದ್ದವು. ಯಾವುದೂ ನಡೆದೇ ಇಲ್ಲವೆಂಬಂತೆ ನೆಮ್ಮದಿಯಿಂದ ಬದುಕತೊಡಗಿದವು. ಮಿದುಳುಭೂಮಿಗೆ ಬಿದ್ದ ಅನುಮಾನದ ಬೀಜಗಳು ಮೊಳಕೆಯೊಡೆಯಲು ಕಾಯುತ್ತಲೇ ಇವೆ. ಆ ಬೀಜಗಳು ಮೊಳಕೆಯಾಗದಂತೆ ನೋಡಿಕೊಳ್ಳುವ ಕಣ್ಣುಗಳು ಕಾದುಕೊಂಡೇ ಕೂತಿವೆ. ಇಲಿ ಹೋದ ಕತೆ ಹುಲಿಯಾಗದಂತೆ ಕಾಪಿಟ್ಟು ಕಾಯುತ್ತಲೇ ಇವೆ.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular