ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರ ನಡೆಸಿದ ಸಿದ್ದರಾಮಯ್ಯ ಪಕ್ಷ ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಹಾಗೆ ಹೇಳಿಲ್ಲ ಎನ್ನುವ ಮೂಲಕ ಮಾತಿಗೆ ತಪ್ಪಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸಿಂಧಗಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಬೊಮ್ಮಾಯಿ, ಮೊದಲು ಭರವಸೆ ನೀಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು ಎಂದು ಮಾತು ಬದಲಿಸಿದರು. ಹಾಗಾಗಿ ಕಾಂಗ್ರೆಸ್ ಮಾತಿಗೆ ತಪ್ಪಿದ ಸರ್ಕಾರ ಎಂದು ಟೀಕಿಸಿದರು.
ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಕಾಂಗ್ರೆಸ್ ಗೆ ಅಚ್ಚೇ ದಿನ್ ಇಲ್ಲದಂತೆ ಆಗಿದೆ. ಅಚ್ಚೇ ದಿನ್ ಯಾರಿಗೆ ಬಂತು ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಕಿಸಾನ್ ಸನ್ಮಾನ್ ಯೋಜನೆಯಡಿ ದೇಶದ 10 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಮತ್ತು ರಾಜ್ಯದ ಯಡಿಯೂರಪ್ಪ ಸರ್ಕಾರ 4 ಸಾವಿರ ರೂಪಾಯಿ ನೀಡುತ್ತಿದೆ. ಹಾಗಾಗಿ ರೈತರನ್ನು ಕೇಳಿದರೆ ಗೊತ್ತಾಗುತ್ತದೆ ಯಾರಿಗೆ ಬಂದಿದೆ ಅಚ್ಚೇ ದಿನ್ ಎಂದು ವ್ಯಂಗ್ಯವಾಡಿದರು.
ದೇಶದ 8 ಕೋಟಿ ಕುಟುಂಬಗಳ ಹೊಣೆ ಹೊತ್ತಿರುವ ಮಹಿಳೆಯರು ನಿತ್ಯವೂ ಒಲೆಯನ್ನು ಊದಿ ಕಣ್ಣೀರು ಸುರಿಸುತ್ತಿದ್ದರು. ಇದನ್ನು ಗಮನಿಸಿದ ನರೇಂದ್ರ ಮೋದಿ 8 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ ಮಾಡಿದರು. ಮಹಿಳೆ ಕಣ್ಣೀರು ಒರೆಸಿದರು. ಆ ಮಹಿಳೆಯರನ್ನು ಕೇಳಿ ಯಾರಿಗೆ ಬಂದಿದೆ ಅಚ್ಚೇ ದಿನ್ ಎಂದು ಲೇವಡಿ ಮಾಡಿದರು.
ಆಯುಶ್ಮಾನ್ ಭಾರತ ಯೋಜನೆಯಡಿ ಹಲವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಯೋಜನೆಯಡಿ ಲಕ್ಷಾಂತರ ಮಂದಿ ಪ್ರಯೋಜನ ಪಡೆದಿದ್ದಾರೆ. ಅವರನ್ನು ಕೇಳಿ ಯಾರಿಗೆ ಬಂದಿದೆ ಅಚ್ಚೇ ದಿನ್ ಎಂದು. ಪ್ರಧಾನಿ ಮೋದಿ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಅದು ಮೋದಿ ಅವರಿಗೆ ಏನೂ ಆಗುವುದಿಲ್ಲ. ಅವಮಾನ ಮಾಡಿದವರ ಸಣ್ಣತನ ತೋರಿಸುತ್ತದೆ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆ ಹಡಗಿಗೆ ಪೂರ್ಣಾವಧಿ ಅಧ್ಯಕ್ಷರೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡರೇ ಹೇಳುತ್ತಾರೆ. ಈ ನಡುವೆ ಸೋನಿಯಾ ಗಾಂಧಿ ನಾನೇ ಪೂರ್ಣಾವಧಿ ಅಧ್ಯಕ್ಷರು ಎಂದು ಹೇಳುತ್ತಾರೆ. ಕಾಂಗ್ರೆಸ್ ಗೆ ಎಂಥಾ ಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷ ಮುಂದಿನ ಚುನಾವನೆಯಲ್ಲೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಟೀಕಿಸಿದರು.