ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಡೇರಾ ಸಚ್ ಸೌದ ಮುಖ್ಯಸ್ಥ ಹಾಗೂ ಸ್ವಯಂ ಘೋಷಿತ ದೇವಮಾನವ ಗುರುಮೀಟ್ ರಾಮ್ ರಹೀಮ್ ಸಿಂಗ್ ಸೇರಿ ನಾಲ್ವರಿಗೆ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
19 ವರ್ಷದ ಹಳೆಯ ಕೊಲೆ ಪ್ರಕರಣದ ವಿಚಾರಣೆ ನಡೆಸಿ ವಾದ-ಪ್ರತಿವಾದಗಳನ್ನು ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ಅಪರಾಧಿ ರಾಮ್ ರಹೀಮ್ ಸಿಂಗ್, ಕಿಶನ್ ಲಾಲ್, ಜಸ್ಬೀರ್ ಸಿಂಗ್, ಅವತಾರ್ ಸಿಂಗ್, ಸಚ್ ದಿಲ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಸಿಬಿಐ ವಿಶೇಷ ಅಭಿಯೋಜ ಎಚ್.ಪಿಎಸ್ ವರ್ಮಾ ತಿಳಿಸಿದ್ದಾರೆ.
ಡೇರಾ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ 2002 ಜುಲೈ 10ರಂದು ಕೊಲೆಯಾಗಿದ್ದರು. ಹರ್ಯಾಣದ ಸಿರ್ಸಾದ ಡೇರಾ ಸಚ್ ಸೌದದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ರಂಜಿತ್ ಸಿಂಗ್ ಅವರನ್ನು ಗುರುಮೀಟ್ ಸಿಂಗ್ ಹತ್ಯೆ ಮಾಡಿದ್ದರು ಎಂದು ಶಂಕಿಸಲಾಗಿತ್ತು.
ಡೇರಾ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳದ ಆರೋಪವುಳ್ಳ ಅನಾಮಧೇಯ ಪತ್ರವನ್ನು ಹಂಚಲಾಗಿತ್ತು. ಇದರ ಹಿಂದೆ ರಂಜಿತ್ ಸಿಂಗ್ ಇದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ರಂಜಿತ್ ಅವರನ್ನು ಹತ್ಯೆಗೈಯಲಾಗಿತ್ತು.
ಕಳೆದ ವಿಚಾರಣೆಯಲ್ಲಿ ರಾಮ್ ರಹೀಮ್ ನ್ಯಾಯಾಲಯಕ್ಕೆ ಸಲ್ಲಿಸಿದ ಎಂಟು ಪುಟಗಳ ಹೇಳಿಕೆಯಲ್ಲಿ ಕ್ಷಮೆ ಕೋರಿದ್ದರು. ಜತೆಗೆ ಸಾಕಷ್ಟು ಪರೋಪಕಾರಿ ಕೆಲಸ ಮಾಡಿದ್ದು ಡೇರಾದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಅನುಯಾಯಿಗಳು ಒಂದು ಕುಟುಂಬದಂತೆ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದರು.
ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಸಿಂಗ್ 2017 ರಲ್ಲಿ ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕಾಗಿ ರೊಹಟಕ್ ಸುನಾರಿ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.