Friday, November 22, 2024
Google search engine
Homeಮುಖಪುಟಯಡಿಯೂರಪ್ಪ ಕಣ್ಣೀರು ಬಿಜೆಪಿ ಸರ್ಕಾರಕ್ಕೆ ಕುತ್ತು ತರಲಿದೆ - ಡಿ.ಕೆ.ಶಿವಕುಮಾರ್

ಯಡಿಯೂರಪ್ಪ ಕಣ್ಣೀರು ಬಿಜೆಪಿ ಸರ್ಕಾರಕ್ಕೆ ಕುತ್ತು ತರಲಿದೆ – ಡಿ.ಕೆ.ಶಿವಕುಮಾರ್

‘ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಯಾವ ನದಿ, ಯಾವ ಡ್ಯಾಂ, ಯಾವ ಸಮುದ್ರಕ್ಕೆ ಎಸೆದಿದ್ದೀರಿ’ ಎಂದು ಬಿಜೆಪಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಟ್ಟಿ ಕೆಆರ್ ಎಸ್ ಡ್ಯಾಂಗೆ ಎಸೆದಿದ್ದಾರೆ ಎಂದು ಅಭ್ಯರ್ಥಿ ಶಿವರಾಜ್ ಸಜ್ಜನ ಸೇರಿ ಬಿಜೆಪಿ ಮುಖಂಡರು ಟೀಕೆ ಮಾಡಿದ್ದ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲೇ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿರುಗೇಟು ನೀಡಿದರು.

‘ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರದ ಹೆಬ್ಬಾಗಿಲು ತೆರೆದಿದ್ದೇ ಯಡಿಯೂರಪ್ಪನವರು ಎಂದು ಹೇಳುತ್ತಿದ್ದ ಬಿಜೆಪಿಯವರು ಅವರನ್ನು ಈಗೇಕೆ ಹೀನಾಯವಾಗಿ ನಡೆಸಿಕೊಂಡರು? ಅವರನ್ಯಾಕೆ ಮೂಲೆಗುಂಪು ಮಾಡಿದರು? ಅವರು ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದರು’ ಎಂದು ಕೆಲವರಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿದರು.

‘ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸರಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿಕೊಂಡು ಹೋಗುತ್ತದೆ’ ಎಂದೂ ಶಿವಕುಮಾರ್ ಹೇಳಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ನಾಡಿಗೆ ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ. ಆದರೆ ಇಲ್ಲಿ ಕಲ್ಲಿದ್ದಲ ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ. ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ. ಜತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು. ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್.ಟಿ. ಪಾಲು, ಆರ್ಥಿಕ ಅನುದಾನ, ನೆರೆ ಪರಿಹಾರ ನೀಡಲಿಲ್ಲ ಎಂದು ದೂರಿದರು.

ಪ್ರಧಾನಿ ಮೋದಿ 20 ಲಕ್ಷ ಕೋಟಿ, ಯಡಿಯೂರಪ್ಪ ಸರ್ಕಾರ 1800 ಕೋಟಿ ರುಪಾಯಿ ಕೊರೊನ ಪ್ಯಾಕೇಜ್ ಘೋಷಣೆ ಮಾಡಿದರು. ಹಣ ಯಾರಿಗಾದರೂ ಬಂತಾ? ಸತ್ತವರ ಕುಟುಂಬಗಳಿಗೆ ಪರಿಹಾರ ಸಿಕ್ಕಿದೆಯೇ? ರೈತರಿಗೆ ಬೆಳೆ ಹಾನಿ ಹಣ ಬಂತಾ? ಹೆಕ್ಟೇರಿಗೆ 10 ಸಾವಿರ ರೂ ಪರಿಹಾರ ಘೋಷಣೆ ಮಾಡಿದರು. ಬಂತಾ? ಎಂಜಿನಿಯರಿಂಗ್ ಪದವೀಧರ ಸಿಎಂ ಬಸವರಾಜ ಬೊಮ್ಮಾಯಿ ಹೇಳಬೇಕು ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಕೇವಲ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಅವರು ರೈತ, ಕಾರ್ಮಿಕ, ಕೋವಿಡ್ ಸೋಂಕಿತರು, ಸತ್ತವರ ಕುಟುಂಬಕ್ಕೆ ಸಹಾಯ ಮಾಡಲಿಲ್ಲ. ಆದರೂ ಅದ್ಯಾವ ಮುಖ ಇಟ್ಟುಕೊಂಡು ಬಂದು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ. ಶ್ರೀನಿವಾಸ ಮಾನೆ ಅವರು ಆಪದ್ಭಾಂದವ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ವೃತ್ತಿ ಉಳಿಸಿಕೊಂಡು ಬಂದವರಿಗೆ, ಉದ್ಯೋಗ ಕಳೆದುಕೊಂಡವರ ಮನೆಗೆ ಹೋಗಿ ತಲಾ 2 ಸಾವಿರ ರೂಪಾಯಿ ಚೆಕ್ ಕೊಟ್ಟು ಬಂದಿದ್ದಾರೆ. ಹಾಗಾಗಿ ಮಾನೆ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಜನರ ಹಿತಕಾಯಲು ಕೃಷ್ಣ, ಮಹದಾಯಿ, ಮೇಕೆದಾಟು ಯೋಜನೆ ವಿಚಾರವಾಗಿ ಏನಾದರೂ ಮನವಿ ಪತ್ರ ನೀಡಿದ್ದಾರಾ? ಹಾಗಾದ್ರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸಾಧನೆ ಏನು? ನಿಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಧ್ವನಿ ಅಡಗಿಸಿದ್ದೀರಿ. ಬಿಜೆಪಿ ಶಾಸಕ ರಾಯಚೂರಿನ ಭಾಗವನ್ನು ತೆಲಂಗಾಣಕ್ಕೆ ಸೇರಿಸ ಬೇಕು ಅಂದಿದ್ದಾರೆ. ಮತ್ತೊಬ್ಬರು ಬೆಳಗಾವಿ ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಹೇಳಿದ್ದರು. ಬಿಜೆಪಿಗೆ ಅಖಂಡ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular