ಬಾಂಗ್ಲಾದೇಶದ ರಂಗ್ಪುರ್ ಜಿಲ್ಲೆಯ ಪಿರ್ ಗಂಜ್ ನಗರದಲ್ಲಿ ಗುಂಪೊಂದು 66 ಮಂದಿ ಹಿಂದೂ ಧರ್ಮೀಯರ ಮನೆಗಳನ್ನು ಹಾನಿಗೊಳಿಸಿದೆ ಅಲ್ಲದೆ 20 ಮನೆಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ದುರ್ಗಾಪೂಜೆಯ ಸಮಯದಲ್ಲಿ ದೇವಾಲಯ ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಹಿಂದೂಧರ್ಮೀಯರು ರಂಗ್ ಪುರ್ ಜಿಲ್ಲೆ ಪಿರ್ ಗಂಜ್ ಉಪಜಿಲ್ಲಾ ದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ಭಾನುವಾರ ರಾತ್ರಿ ಢಾಕಾ ರಾಜಧಾನಿಗೆ 224 ಕಿಲೋ ಮೀಟರ್ ದೂರವಿರುವ ಪಿರ್ ಗಂಜ್ ನಲ್ಲಿ ಹಿಂದೂ ಧರ್ಮೀಯರ 20 ಮನೆಗಳನ್ನು ದುಷ್ಕರ್ಮಿಗಳ ಗುಂಪೊಂದು ಸುಟ್ಟು ಹಾಕಿದೆ.
ಭಾನುವಾರ ರಾತ್ರಿ 10 ಗಂಟೆ ಬೆಂಕಿ ಹಚ್ಚಿದಾಗ ಮನೆಯಲ್ಲಿದ್ದವರೆಲ್ಲರೂ ಹೊರಗೆ ಓಡಿಬಂದರು ಎಂದು ಹೇಳಲಾಗಿದೆ. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆ ಸಂಬಂಧ 52 ಮಂದಿ ಶಂಕಿತರನ್ನು ಬಂಧಿಸಲಾಗಿದೆ.
ಮನೆಗಳಿಗೆ ಬೆಂಕಿ ಹಚ್ಚಿರುವ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ಭದ್ರತಾ ಪಡೆಗಳ ಜೊತೆ ಶೋಧ ನಡೆಯುತ್ತಿದೆ.
ಸ್ಥಳೀಯ 29 ಮನೆಗಳು ಸುಟ್ಟು ಹೋಗಿವೆ. ಎರಡು ಅಡುಗೆ ಮನೆಗಳಿಗೆ ಬೆಂಕಿ ಇಡಲಾಗಿದೆ. ಪಿರ್ ಗಂಜ್ ಮಹಿಪುರ್ ನಲ್ಲಿ ಕೋಮು ಗಲಭೆ ಸೃಷ್ಟಿಸುವ ಯತ್ನ ನಡೆಯುತ್ತಿದೆ. ದುಷ್ಕರ್ಮಿಗಳ ಗುಂಪು ಕೋಮುಗಲಭೆಗೆ ಪ್ರಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.