ಉತ್ತರಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಅಲ್ಲಲ್ಲಿ ಭೂಕುಸಿತ ಸಂಭವಿಸಿ 23 ಮಂದಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಪುಷ್ಪಕರ್ ಸಿಂಗ್ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಭಾನುವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ರಾಜ್ಯದ ಬಹುತೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರಸಿದ್ದ ಪ್ರವಾಸಿ ಸ್ಥಳ ನೈನಿತಾಲ್ ಮತ್ತು ಗರ್ ವಾಲ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಎಲ್ಲ ಮೂರು ರಸ್ತೆಗಳು ಕಡಿತಗೊಂಡಿದ್ದು ದ್ವೀಪವಾಗಿ ನಿರ್ಮಾಣವಾಗಿದೆ.
ನೈನಿತಾಲ್ ನಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಇದುವರೆಗೆ ಮಳೆ ಸಂಬಂಧದಿಂದ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ ಆಗಿದೆ. ಭೂಕುಸಿತದಿಂದ ಹಾಸ್ಟೆಲ್ ಕಟ್ಟಡ ನಾಶವಾಗಿದೆ. ರಾಮನಗರ-ರಾನಿಕ್ ಸೆಟ್ ಮಾರ್ಗದಲ್ಲಿ ಇರುವ ಲೆಮನ್ ಟ್ರೀ ರೆಸಾರ್ಟ್ ನಲ್ಲಿ 100ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ.
ಮಾಲ್ ರಸ್ತೆ-ನೈನಿತಾಲ್ ಸಮೀಪ ಇರುವ ನೈನಿದೇವಿ ಹಾಗೂ ನೈನಿ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಪರಿಸ್ಥಿತಿ ಉಂಟಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಗೌಲ ನದಿ ಸಮೀಪ ಆನೆಯೊಂದು ಸಿಲುಕಿಕೊಂಡಿದ್ದು ಅರಣ್ಯ ಇಲಾಖೆ ಆನೆಯನ್ನು ರಕ್ಷಿಸಲು ಪ್ರಯತ್ನ ನಡೆಸುತ್ತಿದೆ.
ಉತ್ತರಖಂಡ ರಾಜ್ಯಕ್ಕೆ 10 ಎನ್.ಡಿ.ಆರ್.ಎಫ್ ತಂಡಗಳು ಬಂದಿಳಿದಿವೆ. ಉತ್ತರಕಾಶಿಯಲ್ಲಿ ಎರಡು ತಂಡಗಳು ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿವೆ. ಡೆಹರಾಡೂನ್, ಚಮೋಲಿ, ಅಲ್ಮೋರ, ಪಿತೊರ್ ಗಡ, ಹರಿದ್ವಾರದಲ್ಲಿ ತಲಾ ಒಂದೊಂದು ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆ ಇನ್ನು 24 ಗಂಟೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಇದುವರೆಗೆ ಪಂತನಗರದಲ್ಲಿ 40 ಸೆಂ.ಮೀ, ಕುಕ್ಕಟೇಶ್ವರದಲ್ಲಿ 34 ಸೆಂ.ಮೀ, ತೆಬ್ರಾದಲ್ಲಿ 7 ಸೆಂ.ಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲೂ ಭಾರೀ ಪ್ರಮಾಣದ ಮಳೆಯಾಗಲಿದೆ. ಹಾಗಾಗಿ ಜನರನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.