ಕೇರಳದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು ಭೂಕುಸಿತದಿಂದ ಇದುವರೆಗೆ 27 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾಗಿರುವ ವ್ಯಕ್ತಿಗಳ ಶೋಧ ಕಾರ್ಯ ಮುಂದುವರಿದಿದೆ. ಇನ್ನೊಂದೆಡೆ ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ಭಕ್ತರಿಗೆ ಶಬರಿಮಲೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ರಾಜ್ಯದ 10 ಜಲಾಶಯಗಳು ಭರ್ತಿಯಾಗಿವೆ. ಹಾಗಾಗಿ ಜಲಾಶಯ ಪ್ರದೇಶದ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾವ ಕ್ಷಣದಲ್ಲಾದರೂ ಜಲಾಶಯಗಳಿಂದ ನೀರನ್ನು ಹೊರಬಿಡುವ ಸಾಧ್ಯತೆ ಇದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಇರುವ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ.
ಶೋಲಯಾರ್, ಕಕ್ಕಿ, ಮಟುಪಟ್ಟು, ಕೋಶಿಯಾರ್, ಕುಂಡಲಾ ಸೇರಿದಂತೆ ಎಲ್ಲಾ 10 ಜಲಾಶಯಗಳು ಭರ್ತಿಯಾಗಿವೆ. ಮಳೆಯ ಮುನ್ಸೂಚನೆಯು ಸಿಕ್ಕಿರುವುದರಿಂದ ಮತ್ತು ಜಲಾಶಯಗಳಿಂದ ನೀರನ್ನು ಹೊರಬಿಡುವುದರಿಂದ ಪ್ರವಾಹ ಪರಿಸ್ಥಿತಿಯ ಭೀತಿಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಪಂಪಾ ನದಿಯಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ. ಈಗ 15 ಸೆಂ.ಮೀಟರ್ ನಷ್ಟು ನೀರಿನ ಮಟ್ಟ ಹೆಚ್ಚಳವಾಗಿದೆ. ಪಂಪಾ ನದಿಗೆ ನೀರು ಹರಿದುಬರುತ್ತಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ಹಾಗಾಗಿ ಶಬರಿಮಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಂಪಾ ನದಿ ಪಾತ್ರದ ಜನರನ್ನು ಸುರಕ್ಷಿತಾ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.
ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ತಗ್ಗುಪ್ರದೇಶ ಮತ್ತು ಜಲಾವೃತ ಪ್ರದೇಶದ ಜನರನ್ನು ಶಿಬಿರಗಳಿಗೆ ಸ್ಥಳಾಂತರಿಸಿದೆ. ಶಿಬಿರಗಳಲ್ಲಿ ಸಂತ್ರಸ್ತರಿಗೆ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಮಾಸ್ಕ್, ಸ್ಯಾನಿಟೈಜರ್ ಒದಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇಡುಕ್ಕಿ ಜಲಾಶಯದ ನೀರಿನ ಮಟ್ಟವು 2396.86 ಅಡಿಗಳಿಗೆ ತಲುಪಿದೆ. ಜಲಾಶಯದ ಮಟ್ಟ 2403 ಅಡಿಗಳು ಎಂದು ಎರ್ನಾಕುಲಂ ಕಲೆಕ್ಟರ್ ಜಾಫರ್ ಮಲಿಕ್ ತಿಳಿಸಿದ್ದಾರೆ. ಸಂಜೆಯ ವೇಳೆಗೆ ನೀರಿನ ಮಟ್ಟ 2397.86 ಅಡಿ ತಲುಪಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.