Saturday, October 19, 2024
Google search engine
Homeಮುಖಪುಟಕೇರಳದಲ್ಲಿ ಭಾರೀ ಮಳೆ- ಸಾವು ಸಂಖ್ಯೆ 21ಕ್ಕೆ ಏರಿಕೆ

ಕೇರಳದಲ್ಲಿ ಭಾರೀ ಮಳೆ- ಸಾವು ಸಂಖ್ಯೆ 21ಕ್ಕೆ ಏರಿಕೆ

ಕೇರಳ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಇದುವರೆಗೆ 21 ಮಂದಿ ಸಾವನ್ನಪ್ಪಿದ್ದು, ಭೂಕುಸಿತದಿಂದ 20ಮಂದಿ ನಾಪತ್ತೆ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಭೂಕುಸಿದು ಎಂಟು ಮಂದಿ ಮೃತಪಟ್ಟಿದ್ದಾರೆ. ಕಳೆದ ರಾತ್ರಿಯಿಡೀ ಸುರಿದ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.

ಮಳೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನ ಶಬರಿಮಲೆಗೆ ಭಕ್ತರು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

ಹಲವು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕ್ಯಾಂಪ್ ಗಳನ್ನು ತೆರೆದು ಅಲ್ಲಿಗೆ ಜನರನ್ನು ಸ್ಥಳಾಂತರಿಸುತ್ತಿದ್ದು, ಕೊರೊನ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ.

ಕ್ಯಾಂಪ್ ಗಳಲ್ಲಿ ಮಾಸ್ಕ್, ಸ್ಯಾನಿಟೈಜರ್, ಕುಡಿಯುವ ನೀರು ಮತ್ತು ಔಷಧಿಗಳು ಲಭ್ಯವಿರುವಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉನ್ನತಮಟ್ಟದ ಸಭೆ ನಡೆಸಿದ್ದು ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ್ದಾರೆ.

ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿ ” ಕೇರಳ ಜನರ ಪರವಾಗಿದ್ದೇನೆ. ಸುರಕ್ಷತೆಯಿಂದ ಇರಬೇಕು ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ಪಾಲಿಸಬೇಕು’ ಎಂದು ಜನರಿಗೆ ಕರೆ ನೀಡಿದ್ದಾರೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪಟ್ಟಣಂತಿಟ್ಟದಲ್ಲಿ ಪರಿಶೀಲನಾ ಸಭೆ ನಡೆಸಿ ತಗ್ಗು ಪ್ರದೇಶದಲ್ಲಿ ಜಾಲವೃತಗೊಂಡಿದ್ದು ಅಲ್ಲಿನ ಜನರನ್ನು ಸ್ಥಳಾಂತರಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ.

ಜಲಾಶಯದ ಪ್ರದೇಶದಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಮನಿಯಾರ್ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದುಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಪ್ರವಾಹ ಬಿಕ್ಕಟ್ಟು ಎದುರಾಗಿದೆ.

ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದ್ದು 12 ಮಂದಿ ನಾಪತ್ತೆಯಾಗಿದ್ದಾರೆ. ಸೇನೆ, ನೌಕಾಪಡೆ, ಮತ್ತು ವಾಯು ಸೇನೆಯನ್ನು ಜನರ ಸಹಾಯಕ್ಕಾಗಿ ರವಾನಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 11 ತಂಡಗಳು ಕೇರಳಕ್ಕೆ ಆಗಮಿಸಿದ್ದು ನೀರಿನಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ.

ಪಟ್ಟನಂತಿಟ್ಟದ ಮಲ್ಲಪ್ಪಲ್ಲಿಯಲ್ಲಿ ಸಿಕ್ಕಿಬಿದ್ದಿರುವ ಜನರನ್ನು ಏರ್ ಲಿಫ್ಟ್ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ವಾಯುಪಡೆಯ ವಿಮಾನಗಳನ್ನು ಕಳಿಸುವಂತೆ ಒತ್ತಾಯ ಹಾಕಲಾಗಿದೆ. ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮೇಲ್ವಿಚಾರಣೆ ಮಾಡುವಂತೆ ತಿಳಿಸಲಾಗಿದೆ.

ಕಕ್ಕಿ ಶೋಲಯಾರ್ ಮತ್ತು ಪೊರಿಂಗಲ್ಕುತು ಸೇರಿದಂತೆ ರಾಜ್ಯ ಏಳು ಅಣೆಕಟ್ಟುಗಳ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಹಲವು ಭಾಗಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು ಅನಾಹುತ ಸೃಷ್ಟಿಗೆ ಕಾರಣವಾಗಿದೆ. ರಾಜ್ಯದಲ್ಲಿ ಪೀರ್ ಮೇಡ್ 24 ಸೆಂ.ಮೀ, ಚಿರುತೋಣಿ, ಚಾಲಕುಡಿ ಮತ್ತು ಪೂಂಜಾರ್ ನಲ್ಲಿ 14 ಸೆಂ.ಮೀ, ತೋಡುಪುಳ 13 ಸೆಂ.ಮೀ, ಸೀತಾಥೊಡೆ 12 ಸೆಂ.ಮೀ, ಸಿಐಎಎಲ್ ಕೊಚ್ಚಿಯಲ್ಲಿ 11 ಸೆಂ.ಮೀ ಮಳೆಯಾಗಿದೆ. ಈ ಸ್ಥಳಗಲ್ಲಿ ಕತ್ತಲೆ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular