Monday, September 16, 2024
Google search engine
Homeಚಳುವಳಿತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲೇ ಸುಡುಗಾಡು ಸಿದ್ದರ ಬದುಕಿಗೆ ಆಸರೆ ಇಲ್ಲ!

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲೇ ಸುಡುಗಾಡು ಸಿದ್ದರ ಬದುಕಿಗೆ ಆಸರೆ ಇಲ್ಲ!

ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ವಾರ್ಡ್ ನಂಬರ್ 6ರ ಗುಂಡುತೋಪಿನಲ್ಲಿ ಜಲಾವೃತಗೊಂಡಿದ್ದ ಸುಡುಗಾಡು ಸಿದ್ದರ ಗುಡಿಸಲು ಪ್ರದೇಶಕ್ಕೆ ಹೋರಾಟಗಾರರು, ಪತ್ರಕರ್ತರು, ಸಾಹಿತಿಗಳ ನೇತೃತ್ವದ ಸತ್ಯಶೋಧಕ ಸಮಿತಿಯ ಸದಸ್ಯರು ಭೇಟಿ ನೀಡಿ ಸುಡುಗಾಡು ಸಿದ್ದರಿಗೆ ಶೀಘ್ರವೇ ವಸತಿ ವ್ಯವಸ್ಥೆ ಕಲ್ಪಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.

ಮುವತ್ತು ವರ್ಷಗಳಿಂದ ಸುಡುಗಾಡು ಸಿದ್ದರು ವಾಸವಾಗಿದ್ದಾರೆ. ಅವರಿಗೆ ಆಧಾರ್, ಓಟರ್ ಐಡಿಗಳು ಇವೆ. ರೇಷನ್ ಕಾರ್ಡುಗಳು ಇವೆ. ಇವರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಸುಡುಗಾಡು ಸಿದ್ದರು ವಾಸವಿರುವ ಗುಂಡುತೋಪಿನಲ್ಲಿ ಚರಂಡಿಯ ವ್ಯವಸ್ಥೆ ಇಲ್ಲ. ಬೀದಿದೀಪ ಇಲ್ಲ. ಹೆಣ್ಣುಮಕ್ಕಳು ಸ್ನಾನ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಕಾಲುವೆ ನೀರು ಹರಿದು 25 ಗುಡಿಸಲು ಬಿದ್ದುಹೋಗಿವೆ ಎಂದು ಹೇಳಿದರು.

ತಹಶೀಲ್ದಾರ್ ಅವರನ್ನು ಕೇಳಿದರೆ ಇದು ಗುಂಡುತೋಪು ಯಾವುದೇ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಸ್ನಾನಕ್ಕೆ ವ್ಯವಸ್ಥೆ ಮಾಡಿಕೊಡಲು ಅವರು ನಿರಾಕರಿಸುತ್ತಾರೆ. ಅಷ್ಟೇ ಅಲ್ಲ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ವರದಿ ನೀಡಿಲ್ಲ. ಗುಡಿಸಲು ಜಲಾವೃತವಾಗಿದೆ. ಬದುಕು ಶೋಚನೀಯವಾಗಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ಇದು. ಡಿಸಿ, ಎಸಿ, ತಹಶೀಲ್ದಾರ್ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸುಡುಗಾಡುಸಿದ್ದರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಸತ್ಯಶೋಧಕ ಸಮಿತಿ ಒತ್ತಾಯಿಸಿತು.

ದಬ್ಬೇಘಟ್ಟದ ಕಾಡುಗುಡ್ಡ ಪ್ರದೇಶದಲ್ಲಿ 2 ಎಕರೆ 20 ಗುಂಟೆ ಜಮೀನು ನೀಡಿರುವುದು ಸ್ವಾಗತಾರ್ಹ. ಅಲ್ಲಿ ಮನೆಗಳನ್ನು ಕಟ್ಟಿ ಕೊಡದೆ ತಾಲೂಕು ಆಡಳಿತ ಮೌನ ವಹಿಸಿದೆ. ಅಲ್ಲಿ ಬೇಗ ಮನೆಗಳು, ರಸ್ತೆ, ಅಂಗನವಾಡಿ, ಸಮುದಾಯ ಭವನ ನಿರ್ಮಿಸಿ, ಬೀದಿ ದೀಪ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅದುವರೆಗೂ ಸುಡುಗಾಡು ಸಿದ್ದರಿಗೆ ಪುನರ್ ವಸತಿ ಕಲ್ಪಿಸಬೇಕು. ಅನ್ನ ಆಹಾರ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ತವರು ಕ್ಷೇತ್ರವಾದರೂ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದು ಸಮಿತಿ ಸದಸ್ಯರು ದೂರಿದರು.

ಗುಂಡುತೋಪಿನಲ್ಲಿ ಯಾವುದೇ ಅಭಿವೃದ್ಧಿ ಮಾಡುವುದಿಲ್ಲ ಎಂದು ಹೇಳುತ್ತಲೇ ಶ್ರೀಮಂತರಿಗೆ ಇದೇ ಗುಂಡುತೋಪಿನಲ್ಲಿ ನಿವೇಶನ ನೀಡಲಾಗಿದೆ. ಕೆಲವರಿಗೆ ನಿವೇಶನ ನೀಡುವುದಾದರೆ ಸುಡುಗಾಡು ಸಿದ್ದರಿಗೆ ಏಕೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತಿಲ್ಲ. ತಹಶೀಲ್ದಾರ್ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇವರಿಗೆ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ. ಸ್ವಚ್ಛಭಾರತ ಅಡಿ ಬಯಲುಶೌಚ ಮುಕ್ತ ಎಂದು ಹೇಳುತ್ತಿದ್ದರೂ ಇವರು ಸ್ಥಿತಿ ಹೇಳತೀರದು. ಭೂಮಿ ಹಕ್ಕು ನೀಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಮಿತಿ ಸದಸ್ಯರು ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಸುಡುಗಾಡು ಸಿದ್ದರಿಗೆ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಮಾತ್ರಗಳನ್ನು ವಿತರಿಸಲಾಯಿತು. ಸತ್ಯಶೋಧಕ ಸಮಿತಿಯಲ್ಲಿ ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಹಂದ್ರಾಳ್ ನಾಗಭೂಷಣ್, ಕುಮಾರ ಸಮತಳ, ವೆಂಕಟೇಶ್, ನಳಿನ, ತಿಪಟೂರು ಕೃಷ್ಣ, ಚಂದ್ರಶೇಖರ್, ಅಶ್ವತ್ಥನಾರಾಯಣ, ಮಡಿಲು ಸಂಸ್ಥೆಯ ಅರಸು ಸೇರಿದಂತೆ ಹಲವರು ಹಾಜರಿದ್ದರು.

ಗುಡಿಸಲುಮುಕ್ತ ಕೇವಲ ಭಾಷಣ:-

“ಗುಡಿಸಲುಮುಕ್ತ ಗ್ರಾಮಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡುವ ರಾಜಕಾರಣಿಗಳದ್ದು ಕೇವಲ ಭಾಷಣ ಮಾತ್ರ. ಮಳೆ ಬಂದ್ರೆ ಎಲ್ಲಾ ಕೊಚ್ಕೊಂಡು ಹೋಗುತೈತೆ ಸ್ವಾಮಿ, ಮುಖ್ಯಮಂತ್ರಿಗಳು ಇತ್ತ ಗಮನ ಕೊಡಬೇಕು. ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು. ನಮಗೆ ಮನೆ ನಿರ್ಮಿಸಿಕೊಟ್ಟು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಿ. ನಮಗೆ ಕೇವಲ ಭಾಷಣ ಬೇಡ. ಭಾಷಣದಿಂದ ನಮ್ಮ ಹೊಟ್ಟೆ ತುಂಬಲ್ಲ. ನೆಲೆ ನಿಲ್ಲಲು ಮನೆಗಳು ಸಿಗುವುದಿಲ್ಲ. ಮೊದಲು ಕೆಲಸ ಮಾಡಿಕೊಡಿ” ಎಂದು ದಿ ನ್ಯೂಸ್ ಕಿಟ್.ಇನ್ ಮುಂದೆ ಸುಡುಗಾಡುಸಿದ್ದರು ಅಳಲು ತೋಡಿಕೊಂಡರು.

ಎಳೆಮಕ್ಕಳ ಪರಿಸ್ಥಿತಿ ಕೇಳೋರಿಲ್ಲ:-

“30 ವರ್ಷದಿಂದ ಇಲ್ಲೇ ವಾಸವಿದ್ದೀವಿ. ಗುಡಿಸಿಲಲ್ಲೇ ಜೀವನ ಸಾಗಿಸ್ತಾ ಇದ್ದೀವಿ. ರಾತ್ರಿ ಆಯ್ತು ಅಂದ್ರೆ ಕತ್ತಲಲ್ಲಿ ಹಾವು ಚೇಳು, ಹುಳು-ಹುಪ್ಪಟೆ ಮಂಡ್ರಗಪ್ಪೆ, ಬರ್ತಾವೆ. ಮಕ್ಳುಮರಿ ಅವ್ವೆ. ಏನಾದ್ರು ಅನಾಹುತ ಆದ್ರೆ ಏನು ಗತಿ? ಎಳೆಮಕ್ಳು ಸ್ವಾಮಿ. ಅವ್ಕೆ ಗೊತ್ತಾಗಲ್ಲ. ಹೋಗ್ತಾವೆ. ಹುಳುಗಳು ಕಚ್ಚಿದ್ರೆ ಔಸ್ಚಿ ಕೊಡ್ಸೋಕು ದುಡ್ಡಿಲ್ಲ. ನಮ್ಮ ಗೋಳು ಕೇಳೋರಿಲ್ಲ, ಹೇಳೋರಿಲ್ಲ. ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗ್ತಿದೆ. ಪರಿಸ್ಥಿತಿ ಸಂಕಟದಿಂದ ಕೂಡಿದೆ. ಯಾರಿಗೂ ಕಾಳಜಿ ಇಲ್ಲ ಅಂಬೋದು ಗೊತ್ತಾಗೈತೆ. ಡಿಸಿ, ಎಸಿ ಎಲ್ಲರಿಗೂ ಮನವಿ ಕೊಟ್ವಿ. ಮಕ್ಕಳು ಮರಿಗಳು ಬೀದಿಗೆ ಬಿದ್ದಿವೆ. ಈ ಪ್ರದೇಶ ಕೆರೆಯಂತೆ ಆಗಿದೆ. ನಮ್ಮ ಪಾಡು ಯಾರಿಗೂ ಹೇಳ ತೀರದು ಸ್ವಾಮಿ” ಎಂದು ಕಣ್ಣೀರು ಕರೆದರು.

ದವಸ-ಧಾನ್ಯ ಕೊಚ್ಚೋದ್ವು; ದಿಕ್ಕಿಲ್ಲ, ದೆಸೆಯಿಲ್ಲ:-

ಮಹಿಳೆಯರು ಕಂಕುಳಲ್ಲಿ ಸಣ್ಣಪುಟ್ಟ ಮಕ್ಕಳನ್ನು ಸಿಕ್ಕಿಸಿಕೊಂಡಿದ್ದರು. ಕೆಲ ಮಕ್ಕಳು ನೀರಿನಲ್ಲೇ ಓಡಾಡುತ್ತಿದ್ದವು. ಇಡೀ ಗುಂಡು ತೋಪಿನ ಸುಡುಗಾಡು ಸಿದ್ದರ ಪಾಡು ಸುಡುಗಾಡಿನಂತೆ ಕಂಡುಬಂತು. ಮಹಿಳೆಯರು ನೋವು ತೋಡಿಕೊಂಡರು. “ನಮ್ಮ ಗುಡಿಸಲಿನಲ್ಲಿದ್ದ ಹಿಟ್ಟು, ರಾಗಿ, ಅಕ್ಕಿ ಎಲ್ಲವೂ ನೀರು ಪಾಲಾಯ್ತು ಸ್ವಾಮಿ, ಬಟ್ಟೆಬರೆ ನೆಂದು ಹೋಗಿವೆ. ಗುಡಿಸಲು ಬಿದ್ದುಹೋಗಿವೆ. ದಿಕ್ಕಿಲ್ಲ, ದೆಸೆ ಇಲ್ಲ. ಕಾಯಿಲೆ ಬಂದ್ರೆ ನೋಡೋರಿಲ್ಲ. ನೀರಿನಲ್ಲಿ ದವಸಧಾನ್ಯ ಕೊಚ್ಚಿ ಹೋಗಿದ್ದರಿಂದ ತಿನ್ನೋಕೂ ಕಷ್ಟವಾಗಿದೆ. ದಾನಿಗಳು ಯಾರಾದ್ರು ನಮಗೆ ಸಹಾಯ ಮಾಡ್ಲಿ ಅಂತ ಕೇಳ್ತೀವಿ. 30 ವರ್ಷದಿಂದ ಇದ್ರೂವೆ ನಮಗೆ ಮನೆ ಇಲ್ಲ, ಮಠ ಇಲ್ಲ. ಚಳಿ, ಮಳೆ, ಬಿಸಿಲು ಎಲ್ಲವೂ ಒಂದೇ ಆಗಿದೆ ಸ್ವಾಮಿ, ಕಷ್ಟ ಹೇಳ್ಕೊಂಡ್ರೆ ಕೇಳೋರೇ ಇಲ್ಲ ಸ್ವಾಮಿ. ತಿಳುವಳಿಕೆ ಇರೋ ಅಧಿಕಾರಿಗಳು ನಮ್ಮ ಸಮಸ್ಯೆ ಏನೆಂದು ಕೇಳುತ್ತಿಲ್ಲ.” ಎಂದು ಮಹಿಳೆಯರು ಪರಿಪರಿಯಾಗಿ ಕಷ್ಟಗಳನ್ನು ವಿವರಿಸಿದರು.

ಚಿಕ್ಕನಾಯಕನಹಳ್ಳಿ 6ನೇ ವಾರ್ಡ್ ನ ಗುಂಡುತೋಪಿನಲ್ಲಿ ನೋವು ಮಡುಗಟ್ಟಿದೆ. ಸಂಕಟ ಹೊರಬೀಳುತ್ತಿದೆ. ಅಹವಾಲು ಸಲ್ಲಿಸಿ ಮನವಿ ಮಾಡಿಕೊಂಡರೂ ಕಲ್ಲೆದೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲವೆಂಬ ಆಕ್ರೋಶ ಸುಡುಗಾಡು ಸಿದ್ದರಿಂದ ವ್ಯಕ್ತವಾಗುತ್ತಿದೆ. ಹೀಗೆ ಆ ಗುಡಿಸಲು ವಾಸಿಗಳು ಮಾತನಾಡುತ್ತಿದ್ದ ವೇಳೆ ಸಣ್ಣಸಣ್ಣ ಮೇಕೆಮರಿಗಳು ನೀರಿನಲ್ಲೇ ಅತ್ತಿಂದಿತ್ತ ಓಡಾಟ ನಡೆಸಿದ್ದವು. ಮೂಕವೇದನೆ ಯಾರಿಗೆ ಗೊತ್ತು?! ಆದರೂ ಮಕ್ಕಳಂತೆ ಅವು ಆಟವಾಡುತ್ತಿದ್ದವು. ಹಿರಿಯ ಮುಖಂಡರು ತಮಗೆ ಒದಗಿದ ಕಷ್ಟ, ನೀರಿನಲ್ಲಿ ತೋಯ್ದು ಹೋಗಿರುವ ಗುಡಿಸಲು, ಮಳೆಯಿಂದ ತುಂಬಿಕೊಂಡ ಕೆನ್ನೀರು, ಅಡುಗೆ ಮಾಡುತ್ತಿದ್ದ ದೃಶ್ಯ ಎಲ್ಲವೂ ಅಲ್ಲಿನ ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular