ಆಧುನಿಕ ಭಾರತೀಯ ಮಹಿಳೆಯರು ವಿವಾಹಪೂರ್ವ ಮತ್ತು ನಂತರವೂ ಒಬ್ಬಂಟಿಯಾಗಿ ಜೀವನ ನಡೆಸಲು ಬಯಸುತ್ತಾರೆ ಮತ್ತು ವಿವಾಹವಾದ ನಂತರ ಜನ್ಮ ನೀಡಲು ಇಷ್ಟಪಡುವುದಿಲ್ಲ. ಬಾಡಿಗೆ ತಾಯ್ತತನದಿಂದ ಮಕ್ಕಳನ್ನು ಪಡೆಯಲು ಬಯಸುತ್ತಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಈ ಮಾತುಗಳನ್ನು ವಿಷಾದಿಂದಲೇ ಹೇಳುತ್ತೇನೆ. ವಿವಾಹವಾದ ನಂತರವೂ ಮಹಿಳೆ ಒಬ್ಬಂಟಿಯಾಗಿರಲು ಮತ್ತು ಜನ್ಮ ನೀಡಲು ಇಚ್ಚಿಸುವುದಿಲ್ಲ. ಬಾಡಿಗೆ ತಾಯ್ತತನದಿಂದ ಮಕ್ಕಳನ್ನು ಪಡೆಯುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ” ಎಂದು ತಿಳಿಸಿದರು.
ಪಾಶ್ಚಿಮಾತ್ಯ ಜೀವನ ಕ್ರಮದಿಂದ ನಮ್ಮ ಆಲೋಚನೆಯಲ್ಲೂ ಬದಲಾವಣೆ ಕಂಡುಬಂದಿದೆ. ಭಾರತೀಯ ಸಮಾಜದ ಮೇಲೆ ಪಶ್ಚಿಮದ ಪ್ರಭಾವ ಹೆಚ್ಚಿದೆ. ಹಾಗಾಗಿ ಜನರು ತಮ್ಮ ಪೋಷಕರೊಂದಿಗೆ ಒಟ್ಟಿಗೆ ಬದುಕಲು ಇಚ್ಚಿಸುವುದಿಲ್ಲ. ಆಕಸ್ಮಿಕವಾಗಿ ನಾವು ಪಾಶ್ಚಿಮಾತ್ಯ ಮಾರ್ಗದಲ್ಲಿ ಹೋಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಜೊತೆ ನಮ್ಮ ಪೋಷಕರು ಇರಲು ಬಯಸುವುದಿಲ್ಲ. ಪ್ರತಿಯೊಬ್ಬ ಬೇರೆಬೇರೆಯಾಗಿ ಇರಲು ಇಚ್ಚಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಏಕಾಂಗಿಯಾಗಿ ಬದುಕು ಕಟ್ಟಿಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿದರು.
ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ ಡಾ.ಸುಧಾಕರ್, ಪ್ರತಿ ಏಳು ಭಾರತೀಯರಲ್ಲಿ ಮಾನಸಿಕ ಸಮಸ್ಯೆಗಳು ಇವೆ. ಇದು ಸಣ್ಣ, ಮಧ್ಯಮ ಮತ್ತು ಗಂಭೀರ ಸ್ವರೂಪದ್ದೂ ಆಗಿರಬಹುದು. ಇಂತಹ ಸಂದರ್ಭದಲ್ಲಿ ಒತ್ತಡ ನಿರ್ವಹಣೆ ಮಾಡಿಕೊಳ್ಳಬೇಕು. ಒತ್ತಡ ನಿರ್ವಹಣೆ ಒಂದು ಕಲೆ. ಭಾರತೀಯರು ಇದನ್ನು ಕಲಿಯುತ್ತಿಲ್ಲ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗವು ಹಲವರನ್ನು ಜರ್ಝರಿತಗೊಳಿಸಿದೆ. ಈ ಕಾರಣಕ್ಕಾಗಿ ಸರ್ಕಾರ ಕೊವಿಡ್-19 ರೋಗಿಗಳಿಗೆ ಸಮಾಲೋಚನೆ ನೀಡಲು ಪ್ರಾರಂಭಿಸಿತು. ಇಲ್ಲಿಯವರೆಗೆ ನಾವು ರಾಜ್ಯದಲ್ಲಿ 24 ಲಕ್ಷ ಕೊವಿಡ್-19 ರೋಗಿಗಳಿಗೆ ಸಲಹೆ ನೀಡಿದ್ದೇವೆ. ಇದನ್ನು ಮಾಡಿದ ಬೇರೆ ಯಾವ ರಾಜ್ಯವೂ ನನಗೆ ಗೊತ್ತಿಲ್ಲ ಎಂದು ಸುಧಾಕರ್ ಹೇಳಿದರು.


