Monday, December 23, 2024
Google search engine
Homeಮುಖಪುಟಕುಲ ಮದಕ್ಕೆ ಕೊಳ್ಳಿ ಇಟ್ಟ ಬಾಬ್ ಮಾರ್ಲಿ ನಾಟಕ

ಕುಲ ಮದಕ್ಕೆ ಕೊಳ್ಳಿ ಇಟ್ಟ ಬಾಬ್ ಮಾರ್ಲಿ ನಾಟಕ

ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕಲಾವಿದರು, ಕವಿಗಳು, ಹೋರಾಟಗಾರರು, ಪ್ರಗತಿಪರ ಚಿಂತಕರು,ವಿದ್ಯಾರ್ಥಿಗಳು, ಬೋಧಕ ವೃಂದ ಹೀಗೆ ಹಲವು ನಮೂನೆಯ ಪ್ರೇಕ್ಷಕ ವರ್ಗ ಜನಜಂಗುಳಿಯಿಂದ ಗಿಜಿಗುಡುತ್ತಿತ್ತು. ಜಂಗಮ ಕಲೆಕ್ಟಿವ್ ಬೆಂಗಳೂರು. ಇವರ ತಂಡ ಕೆ.ಪಿ ಲಕ್ಷ್ಮಣ್ ರಚನೆ, ವಿನ್ಯಾಸ,ನಿರ್ದೇಶನದ, ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕ ನೋಡಲು ನೆರೆದಿದ್ದ ಜನಸ್ತೋಮ.

ಜಮೈಕಾದ ರೆಗ್ಗಿ ಗಾಯಕ, ಗಿಟಾರ್ ವಾದಕ ಮತ್ತು ಗೀತ ರಚನಾಕಾರ. ಬಾಬ್ ಮಾರ್ಲಿ ವಿಶ್ವದಾದ್ಯಂತ ಜಮೈಕನ್ ಸಂಗೀತದ ಗುಂಗು ಹಿಡಿಸಿದವನು. ಮತ್ತು ಸಂಗೀತವನ್ನು ಆಧ್ಯಾತ್ಮಿಕ ಪ್ರಜ್ಞೆಯೊಂದಿಗೆ ಬೆಸೆದವನು. ಇವನ ಸಂಕೇತಕವಾದ ಗಿಟಾರ್, ಪುಸ್ತಕ, ಮದ್ಯ, ಮಾಂಸಗಳಿಂದ ಮೊದಲ್ಗೊಂಡು ಸಂಗೀತದ ಗುಂಗಿನಲ್ಲೇ ನಾಟಕ ಆರಂಭಗೊಳ್ಳುತ್ತದೆ.
ಮೂಲತಃ ದೇವದಾಸಿ ಕುಟುಂಬದ ಹಿನ್ನೆಲೆಯಿಂದ ಬಂದ ಉಪನ್ಯಾಸಕಿಯೊಬ್ಬರಿಂದ ತೆರೆದುಕೊಳ್ಳುವ ಈ ನಾಟಕ. ಬಾರ್ ಒಂದರಲ್ಲಿ ಸಪ್ಲಯರ್ ಆಗಿ ಕೆಲಸ ಮಾಡುವ ಜೂನಿಯರ್ ಬಾಬ್ ಬಾರ್ಲಿ ವೇಷಧಾರಿ ಇನ್ನೊಬ್ಬ ಯುವಕ. ಕಲೆಯಲ್ಲಿ ಏನಾದರೂ ಸಾಧಿಸಬೇಕೆಂದು ಹಳ್ಳಿ ಬಿಟ್ಟು ನಗರ ಸೇರಿದ್ದ ಮೊಗದೊಬ್ಬ ಯುವಕ. ಈ ಮೂರು ಜನ ಸಮಾನ ದುಃಖಿಗಳು. ಈ ಸಮಾಜದ ಕರಾಳ ಜಾತಿ ವ್ಯವಸ್ಥೆಗೆ ಬಲಿಯಾಗಿದ್ದವರು. ಆ ಕಾರಣಕ್ಕಾಗಿ ಜಾತಿಯನ್ನು ಬಚ್ಚಿಟ್ಟು ಬೆಂಗಳೂರಿನ ಮನೆಯೊಂದರಲ್ಲಿ ಬಾಡಿಗೆದಾರರಾಗಿ ನೆಲಸಿದ್ದವರು. ತಿಂದು ಬಿಸಾಡಿದ್ದ ಒಂದೇ ಒಂದು ಮೂಳೆಯ ಸುತ್ತ ಜರುಗುವ ಈ ನಾಟಕದ ಕಥನ ಜಾತಿಯ ಕರಾಳತೆಯ ಇನ್ನೊಂದು ಮಗ್ಗುಲಿಗೆ ತೆರೆದುಕೊಳ್ಳುತ್ತ ಸಾಗುತ್ತದೆ.

ಜಾತಿಯ ಕರಾಳತೆ, ಅಸ್ಪೃಶ್ಯತೆಯ ಯಾತನೆ, ಭಾರತದ ಮನೆ ಮತ್ತು ಮನಸ್ಸುಗಳನ್ನು ಹೇಗೆ ಸುಡುತ್ತಿದೆ ಎನ್ನುವುದನ್ನು ಹೇಳುತ್ತಲೇ ಸಾಗುವ ಈ ನಾಟಕ ದಲಿತ ಸಮುದಾಯದ ತಲ್ಲಣಗಳು ಮತ್ತು ಅವರ ಆಹಾರ ಪದ್ಧತಿ ಮೇಲಾಗುವ ದಾಳಿ, ಈ ಎಲ್ಲದರ ಜೊತೆಗೆ ಕವಿ ಮಿತ್ರ ಎನ್.ಕೆ. ಹನುಮಂತಯ್ಯ ಅವರ ಪದ್ಯದ ಸಾಲುಗಳು ನಾಟಕ ನೋಡುವ ವರ್ಗವನ್ನು ಹಿಡಿದಿಟ್ಟುಕೊಳ್ಳುತ್ತಾ ಸಾಗುತ್ತದೆ. ಜಾತಿ ಪದ್ದತಿಯನ್ನು ಎಳೆ ಎಳೆಯಾಗಿ ವಿವರಿಸಿ ಆ ಕುಲ ಮದಕ್ಕೆ ಕೊಳ್ಳಿ ಇಡುತ್ತಲೇ ಸಾಗುವ ನಾಟಕ. ಒಂದು ಕಪ್ ಕಾಫಿ ವಿತ್ ಬಾಬ್ ಮಾರ್ಲಿ ಜೊತೆ ಕಳೆದ ಸಂಜೆ ಸಾರ್ಥಕ. ಇದು ತುಮಕೂರಲ್ಲಿ ಪ್ರದರ್ಶನಗೊಳ್ಳಲು ಕಾರಣರಾದ ಆತ್ಮೀಯರಾದ ಡಾ. ಬಸವರಾಜು ಚರಕ ಆಸ್ಪತ್ರೆ ಇವರ ಕುಟುಂಬ, ಡ್ಯಾಗೇರಹಳ್ಳಿ ವಿರುಪಾಕ್ಷ, ಮತ್ತು ಸಮಾನ ಮನಸ್ಕ ಗೆಳೆಯರಿಗೆ, ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.

ಡಾ. ಶಿವಣ್ಣ ತಿಮ್ಲಾಪುರ, ಲೇಖಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular