ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಬುದ್ಧಿವಂತ ರಾಜಕಾರಣಿ. ಅವರು ಆ ರೀತಿ ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ. ರವಿ ಏನು ಮಾತನಾಡಿದ್ದಾರೆ, ಏನು ಮಾತನಾಡಿಲ್ಲ ಎನ್ನುವುದರ ಬಗ್ಗೆ ತೀರ್ಮಾನ ಮಾಡೋರು ಪರಿಷತ್ ಸಭಾಪತಿಗಳು. ವಿಧಾನ ಪರಿಷತ್‌ನಲ್ಲಿ ಸಭಾಪತಿಗಳು ಎಷ್ಟು ಕಸ್ಟಡಿಯನ್ನೋ ಅದೇ ರೀತಿ ಲೋಕಸಭೆಯಲ್ಲಿ ನಮ್ಮ ಸ್ಪೀಕರ್ ಸಹ ಅಷ್ಟೇ ಕಸ್ಟೋಡಿಯನ್. ಹಾಗಾಗಿ ಸಭಾಪತಿಗಳೇ ತೀರ್ಮಾನ ಮಾಡುತ್ತಾರೆ ಎಂದರು.
ಸಿ.ಟಿ. ರವಿ ಅವರು ಏನು ಮಾತನಾಡಿದ್ದಾರೆ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಪತ್ರಿಕೆಗಳಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬುದನ್ನು ಓದಿದ್ದೇನೆ. ಆದರೆ ರವಿ ಅವರನ್ನು ಇಡೀ ರಾತ್ರಿ ಪೊಲೀಸರು ಜೀಪಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿ ಮಾನಸಿಕ ಹಿಂಸೆ ನೀಡಿರುವುದು ಯಾವುದೇ ನಾಗರಿಕ ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದರು.