Saturday, December 7, 2024
Google search engine
Homeಮುಖಪುಟಶ್ರೇಷ್ಟತೆಯ ವ್ಯಸನಕ್ಕೆ ಗುದ್ದುವ ನಾಟಕ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ

ಶ್ರೇಷ್ಟತೆಯ ವ್ಯಸನಕ್ಕೆ ಗುದ್ದುವ ನಾಟಕ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ

ಬಾಬ್ ಮಾರ್ಲಿ ದಲಿತ ಸಂವೇದನೆಯೊಂದರ ಮುಂದುವರೆದ ಭಾಗವಾಗಿ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರದರ್ಶನವಾಯಿತು. ದಲಿತ ಸಾಂಸ್ಕೃತಿಕ ಲೋಕವೊಂದರ ಗಟ್ಟಿ ಅನುಭವವನ್ನು ರಂಗದ ಮೇಲೆ ಕೆ.ಪಿ. ಲಕ್ಷ್ಮಣ್ ಅವರ ತಂಡ ಮನಮುಟ್ಟುವಂತೆ ಕಟ್ಟಿಕೊಟ್ಟಿತು. ಹಳ್ಳಿಯ ಅಸ್ಪೃಶ್ಯತೆಯ ಲೋಕದಿಂದ ಬೇಸತ್ತ ದಲಿತ ಯುವ ಪೀಳಿಗೆ ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯಗಳು ಮನಕುಲುಕುವಂತಿತ್ತು. ಮೂಳೆವೊಂದರ ಜಾಡು ಹಿಡಿದು ನಡೆದ ಈ ನಾಟಕ ಅಸ್ಪೃಶ್ಯತೆಯ ಸಂಕಟಗಳನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ಯಶಸ್ವಿಯಾಯಿತು. ಮಾಂಸ ಹಾಗೂ ಅದಕ್ಕೆ ಅಂಟಿಕೊಂಡ ಸಾಂಸ್ಕೃತಿಕ ಬದುಕು ಶ್ರೇಷ್ಠತೆಯ  ವ್ಯಸನ ಸಂಸ್ಕೃತಿವೊಂದರ ಮರ್ಮಾ೦ಗಕ್ಕೆ ಗುದ್ದಿದ ನಾಟಕದ ಸಂಭಾಷಣೆ ಪ್ರೇಕ್ಷಕರನ್ನು ಬೆರಗುಗೊಳಿಸುವಂತಿತ್ತು. ಹಟ್ಟಿ ಮಾರಿಗೆ ಹರಕೆ ಹೊತ್ತು ಬೆತ್ತಲಾಗುವ ದೇವದಾಸಿಯ ನೈಜ ಚಿತ್ರಣವನ್ನು ಹಾಗೂ ಅದರ ಸ್ಥಿತಿಯನ್ನು ಲಕ್ಷ್ಮಣ್ ಸೊಗಸಾಗಿಯ ಕಟ್ಟಿಕೊಟ್ಟಿದ್ದಾರೆ. ಆ ಮುಖಾಂತರ ಬೆತ್ತಲಾಗುವುದು ದೈಹಿಕವಾಗಿ ದಲಿತ ಹೆಣ್ಣು ಮಗಳಾದರು ನಿಜ ಅರ್ಥದಲ್ಲಿ ಬೆತ್ತಲಾಗುವುದು ಭಾರತೀಯ ಹೆಣ್ಣುಮಕ್ಕಳು. ಭಾರತದಲ್ಲಿ ದಲಿತರ ಸಾವಿರಾರು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿದ್ದರು ಅದನ್ನು ರಾಜಕಾರಣಗೊಳಿಸುತ್ತಿರುವ ಇಂದಿನ ಮೇಲ್ಜಾತಿ ಮನಸ್ಸುಗಳನ್ನು ನಾಚಿಸುವಂತಹ ನಾಟಕದ ಬೆಳವಣಿಗೆ ತುಂಬಾ ಅರ್ಥಗರ್ಭಿತವಾಗಿದೆ.

ನಾಟಕದ ಕೊನೆಯಲ್ಲಿ ಹಾಡುವ ಹಾಡು ಭವಿಷ್ಯದ ಭಾರತವನ್ನು ನೆನಪಿಸುತ್ತದೆ. ಎಲ್ಲಿಯವರೆಗೂ ಅಸಮಾನತೆಯನ್ನುವಂಥದ್ದು ಈ ದೇಶದ ಒಳಗಡೆ ಇರುತ್ತದೆಯೋ ಅಲ್ಲಿಯವರೆಗೂ ಸಂಘರ್ಷ ಹೋರಾಟ ಇವೆಲ್ಲವೂ ಸಹ ಸಮುದಾಯಗಳ ಭಾಗವಾಗಿ ಸಾಗುತ್ತದೆ. ಹೋರಾಟ ಮತ್ತು ಸಂಘರ್ಷಗಳ ಮೂಲಕವೇ ತಳಸಮುದಾಯಗಳ ಅಸ್ಮಿತೆಯನ್ನುಉಳಿಸಲಿಕ್ಕೆ ಸಾಧ್ಯ ಎಂಬುದನ್ನು ನಾಟಕದ ಹಾಡು ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ನಾಟಕದಲ್ಲಿ ಬರುವ ವೃತ್ತದ ಜಿಗತ ಅಕ್ಷರ ಅರಿವಿನ ಮೂಲಕ ದಾಸ್ಯದ ಸಂಕೋಲಗಳಿಂದ ಬಿಡುಗಡೆ ಪಡೆಯುವ ಉತ್ಸಾಹ ನಾಟಕದಲ್ಲಿ ಜೀವ ತಳೆಯುತ್ತದೆ. ಆದರೆ ಮಾಂಸ ಹಾಗೂ ಮಾಂಸದೊಂದಿಗಿನ ಬದುಕು ಇಡೀ ತಳ ಸಮುದಾಯಗಳ ಭಾಗವಾಗಿ ಸಾಗಬೇಕು ಎನ್ನುವುದನ್ನು ನಾಟಕ ದ್ವನಿ ಪೂರ್ಣವಾಗಿ ಕಟ್ಟಿಕೊಡುತ್ತದೆ.

ದೇವದಾಸಿಯ ಮಗಳು ದೇವದಾಸಿಯಾಗದೆ ಸ್ವಾಭಿಮಾನದ ಬದುಕಿಗಾಗಿ ಪರಿತಪಿಸುವ ಟೀಚರ್ ನ ಪಾತ್ರ ಎಲ್ಲರ ಗಮನಸೆಳೆಯುತ್ತದೆ. ಪರಂಪರೆಯೊಂದರ ನೋವು ಸಂಕಟಗಳು ಜೊತೆಗಿದ್ದಾಗ ಮಾತ್ರ ಮನುಷ್ಯನಲ್ಲಿ ಸ್ವಾಭಿಮಾನ ಜಾಗೃತಗೊಳ್ಳುವುದಕ್ಕೆ ಸಾಧ್ಯ. ನಾನು ಅಸ್ಪೃಶ್ಯ ಎಂಬ ಎನ್.ಕೆ. ಹನುಮಂತಯ್ಯನವರ ಕವಿತೆ ನಾಟಕದ ಸನ್ನಿವೇಶಕ್ಕೆ ಜೀವ ತುಂಬಿದೆ. ತಂದೆಯ ಕುಲವಾಡಿಕೆ ಮುಂದುವರಿಸದೆ ಅಕ್ಷರಕ್ಕಾಗಿ ಹಠ ಹಿಡಿಯುವ ನವಪೀಳಿಗೆಯ ಹುಡುಗನ ಆರ್ದ್ರತೆ ಪ್ರೇಕ್ಷಕರನ್ನ ಭಾವುಕರನ್ನಾಗಿಸುತ್ತದೆ. ಆದರೆ ನಾಟಕದ ಕೊನೆಯಲ್ಲಿ ಯುವಪೀಳಿಗೆ ಮನೆಯ ಮಾಲೀಕರೊಂದಿಗೆ ಪ್ರತಿಭಟಿಸುವ ಎಲ್ಲಾ ಅವಕಾಶಗಳಿದ್ದರೂ ಪಲಾಯನವಾಗುವುದು ಬಹುಶಃ ಭವಿಷ್ಯದ ಭಾರತದ ಯುವ ಪೀಳಿಗೆಯೊಂದರೆ ಅಸಹಾಯಕತೆಯೋ ಅಥವಾ ನಾಟಕಕಾರ ಪ್ರೇಕ್ಷಕರ ವಿವೇಚನೆಗಾಗಿ ಬಿಟ್ಟ ವಿವೇಕವೋ, ತಿಳಿಯದಾಗಿದೆ. ಒಟ್ಟಿನಲ್ಲಿ ನಾಟಕ ಸಂಘಟಿಸಿದ ವಿರೂಪಾಕ್ಷ ದ್ಯಾಗೇರಹಳ್ಳಿ ಮತ್ತು ಅವರ ತಂಡಕ್ಕೆ ಧನ್ಯವಾದಗಳು.

ಜಿ.ಎಚ್.ಅಶ್ವತ್ಥನಾರಾಯಣ್, ಲೇಖಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular