ಗಣಪತಿ ವಿಸರ್ಜನೆ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಕೆಸರಿನಿಂದ ಹೊರಬರಲು ಸಾಧ್ಯವಾಗದೆ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕಟ್ಟೆಯಲ್ಲಿ ಸೆ.15ರಂದು ನಡೆದಿದೆ.
ಮೃತರನ್ನು ರಂಗನಹಟ್ಟಿ ಗ್ರಾಮದ 50 ವರ್ಷದ ರೇವಣ್ಣ, ಆತನ ಪುತ್ರ 26 ವರ್ಷದ ಶರತ್ ಮತ್ತು 22 ವರ್ಷದ ದಯಾನಂದ್ ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಮೆರವಣಿಗೆ ನಡೆಸಿ ಅಪರಾಹ್ನ 3ಗಂಟೆಯ ಬಳಿಕ ರಂಗನಕಟ್ಟೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ಬಂದಿದ್ದು ಈ ಸಂದರ್ಭದಲ್ಲಿ ಶರತ್ ಮತ್ತು ದಯಾನಂದ್ ಗಣೇಶನನ್ನು ಹಿಡಿದು ನೀರಿಗೆ ಇಳಿದರು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಕಟ್ಟೆಯಲ್ಲಿನ ಕೆಸರಿನಿಂದ ಕಾಲುಗಳು ಬುರುಜೆಯಲ್ಲಿ ಸಿಲುಕೊಂಡು ಈಜಲು ಸಾಧ್ಯವಾಗದೆ ರಕ್ಷಣೆಗಾಗಿ ಕೂಗಿಕೊಂಡರು ಎನ್ನಲಾಗಿದ್ದು ಆಗ ಶರತ್ ತಂದೆ ರೇವಣ್ಣನೂ ನೀರಿಗೆ ಧುಮುಕಿದರು. ಆದರೆ ಆತನಿಗೂ ಈಜು ಬಾರದೆ ಮೂವರು ನೀರಿನಲ್ಲಿ ಮುಳುಗಿ ಹೋಗಿದ್ದಾರೆ.
ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿಯೂ ಬಂದಿದ್ದಾರೆ. ನಂತರ ಕಟ್ಟೆಗೆ ಇಳಿದು ಶವಗಳನ್ನು ತೆಗೆಯಲು ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.