ನಮ್ಮ ಸರ್ಕಾರದ ಬಗ್ಗೆ ಟೀಕೆ-ಟಿಪ್ಪಣಿಗಳು ಬಂದಾಗಿಯೂ ಸಹ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದೇವೆ. ಆದರೂ ಪ್ರತಿಪಕ್ಷದವರು ಸರ್ಕಾರದ ಅಭಿವೃದ್ಧಿ ವಿಚಾರಗಳನ್ನು ಬಿಟ್ಟು ಕೇವಲ ಟೀಕೆ ಮಾಡುವುದರಲ್ಲೇ ಸಮಯ ವ್ಯರ್ಥಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಆರೋಪಿಸಿದರು.
ತುಮಕೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ತಪ್ಪು ಮಾಡಿದರೂ ಕಾನೂನು ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರದ ಆಡಳಿತ ಅವಧಿಯಲ್ಲಿ ತಪ್ಪುಗಳು ನಡೆದಿದ್ದರೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಎಷ್ಟೇ ಪ್ರಭಾವಿಗಳಿರಲಿ, ಜನಪ್ರತಿನಿಧಿಗಳಾಗಲಿ, ಅಧವಾ ಅಧಿಕಾರಿಗಳಾಗಲಿ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಗರಣವು ಬೆಳಕಿಗೆ ಬಂದ ಕೂಡಲೇ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರಿಂದ ರಾಜಿನಾಮೆ ಪಡೆದುಕೊಂಡರು. ಆಯೋಗ ರಚಿಸಿ ತನಿಖೆ ಪೂರ್ಣಗೊಳಿಸಲು ಆದೇಶಿಸಿದರು. ಎಸ್ಐಟಿ ರಚಿಸಿ ಸೂಕ್ತ ತನಿಖೆಗೆ ಸೂಚಿಸಿದರು. ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಡಿ, ಸಿಬಿಐ ತನಿಖೆಗೆ ಸೂಚಿಸಿದೆ. ತಪ್ಪುಗಳನ್ನು ಮುಚ್ಚಿಡದೇ ಕ್ರಮ ವಹಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಅಲ್ಲಲ್ಲಿ ಆದ ಅಹಿತಕರ ಘಟನೆಗಳನ್ನು ನಿಯಂತ್ರಿಸಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಂತೆ ಕೋಮುಗಲಭೆ, ರಾಜಕೀಯ ಗಲಾಟೆಗಳು ನಡೆದಿಲ್ಲ. ರಾಜ್ಯದ ಶಾಂತಿಗೆ ಭಂಗ ತರಲು ಪ್ರಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಮುನಿರತ್ನ ಆಡಿಯೋ ರೆಕಾರ್ಡ್ ಒಂದರಲ್ಲಿ ಒಂದು ಸಮುದಾಯದ ಬಗ್ಗೆ ಅವಹೇಳನ ಮಾಡಿ ಅವಮಾನಿಸಿದರು ಎಂಬ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿ ಬಂಧಿಸಿ ತನಿಖೆ ಆರಂಭಿಸಲಾಗಿದೆ. ಎರಡು ದಿನದ ಅವಧಿಗೆ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ. ಆಡಿಯೋ ನನಗೆ ಸಂಬಂಧಿಸಿದ್ದಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಅದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಮುನಿರತ್ನ ಅವರದ್ದೇ ಎಂದು ಖಚಿತವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.