ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ತುಮಕೂರು ನಗರದ ಹೊರವಲಯದ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ-2024, ಸ್ವಚ್ಛತೆಯೆಡೆ ದಿಟ್ಟ ಹೆಜ್ಜೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಮಾಡುವುದು ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಅದನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಜನಪ್ರತಿನಿಧಿಗಳು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದ ಜನರ ಬದುಕು ಹಸನಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಹಳ್ಳಿಗಳ ಸರ್ವತೋಮುಖ ಪ್ರಗತಿಗೆ ಕಾರ್ಯೋನ್ಮುಖರಾಗಬೇಕು ಎಂದರು.
ದೇಶದ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನಸಾಮಾನ್ಯರು ಎಲ್ಲರೂ ಮುಂದಾಗಬೇಕು. ಆಗ ಮಾತ್ರ ಮಹಾತ್ಮಗಾಂಧಿಯವರ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ ಎಂದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ ಗ್ರಾಮ ಪಂಚಾಯ್ತಿಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಸಚಿವ ಸೋಮಣ್ಣ ಹೇಳಿದರು.
ಪಿಡಿಓ ಸಹಿ ಹೈಕೋರ್ಟ್ ಜಡ್ಜ್ ಗೆ ಸಮಾನ. ಹಾಗಾಗಿ ಪಿಡಿಓಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಹಳ್ಳಿಗಳ ಸ್ವಚ್ಛತೆ, ಪ್ರಗತಿ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಹೊಣೆಗಾರಿಗೆ ಪಿಡಿಓಗಳ ಮೇಲೆ ಹೆಚ್ಚಿರುತ್ತದೆ ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಪ್ರಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸPರಾದ ಸುರೇಶ್ ಗೌಡ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬೆಳಗುಂಬ ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ, ತಾ.ಪಂ. ಮಾಜಿ ಅಧ್ಯಕ್ಷ ಗಂಗಾಂಜನೇಯ ತಾ.ಪಂ. ಇಓ ಹರ್ಷಕುಮಾರ್, ಬೆಳಗುಂಬ ಗ್ರಾ.ಪಂ. ಪಿಡಿಓ ಯೋಗ ಶ್ರೀನಿವಾಸ್, ಸಣ್ಣಮಸಿಯಪ್ಪ, ಕುಂಭಯ್ಯ, ಶಂಕರಣ್ಣ, ಬೆಳಗುಂಬ ವೆಂಕಟೇಶ್ ಮತ್ತಿತರರು ಹಾಜರಿದ್ದರು.