ಚಿರತೆಗಳು ದಾಳಿ ನಡೆಸಿ 23 ಕುರಿಗಳನ್ನು ಕೊಂದು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿರತೆಗಳು ಕುರಿಗಳನ್ನು ಕೊಂದು ಹಾಕಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಈ ಕುರಿಗಳು ಮಲ್ಲಣ್ಣ ಎಂಬುವರಿಗೆ ಸೇರಿದವು ಎಂದು ತಿಳಿದುಬಂದಿದೆ. ಕುರಿಗಾಹಿ ಮಲ್ಲಣ್ಣ ಕುರಿರೊಪ್ಪಕ್ಕೆ ಅಳವಡಿಸಿದ್ದ ಮೆಸ್ ಕಿತ್ತು ಹಾಕಿ ಒಳ ನುಗ್ಗಿರುವ ಚಿರತೆಗಳು ಕುರಿಗಳ ಮೇಲೆ ದಾಳಿ ನಡೆಸಿದ್ದು, 23 ಕುರಿಗಳನ್ನು ಕೊಂದು ಹಾಕಿವೆ. ಮೂರು ಕುರಿಗಳಿಗೆ ಗಾಯಗೊಳಿಸಿವೆ.
ಕುರಿಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ನನಗೆ ಕುರಿಗಳ ಸಾವಿನಿಂದ ದಿಕ್ಕುತೋಚದಂತಾಗಿದೆ. ಸರ್ಕಾರ ಕೂಡಲೇ ಆರ್ಥಿಕ ಸಹಾಯ ನೀಡಬೇಕೆಂದು ಮಲ್ಲಣ್ಣ ಒತ್ತಾಯಿಸಿದ್ದಾರೆ.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದನಗೌಡ, ಉಪ ವಲಯ ಅರಣ್ಯಾಧಿಕಾರಿ ಬಿ.ಎನ್.ಮುತ್ತುರಾಜು, ಪುರವರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿಲೀಪ್ ಭೇಟಿ ನೀಡಿ ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಮಲ್ಲಣ್ಣ ಅವರಿಗೆ ಸಾಂತ್ವನ ಹೇಳಿದ್ದಾರೆ.