ತುಮಕೂರು ನಗರದ ರಾಮಕೃಷ್ಣ ಆಶ್ರಮ ಬಳಿಯಿರುವ ಬಾಲಮಂದಿರದ ಅಧೀಕ್ಷಕಿ ಸತ್ಯಪ್ರೇಮ ಅವರು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಹಾಗೂ ಏಳು ದಿನದ ಒಳಗೆ ಸಮಾಜಯಿಷಿ ನೀಡುವಂತೆ ಆದೇಶಿಸಿದ್ದಾರೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ರವಿ ಅವರು ಕಳೆದ ಆಗಸ್ಟ್ 23 ರಂದು ಇಲ್ಲಿನ ಬಾಲಮಂದಿರಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಈ ವೇಳೆ ದಾಖಲಾತಿಗಳನ್ನು ಪರಿಶೀಲನೆ ಮಾಡಿದಾಗ ಪೋಕ್ಸೋ ಸಂತ್ರಸ್ತರಿಗೆ ಸಹಾಯಧನವನ್ನು ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೇ ಬಾಲಮಂದಿರದಲ್ಲಿರುವ 63 ಮಕ್ಕಳ ಪೈಕಿ 23 ಮಕ್ಕಳನ್ನು ವಿವಿಧ ವಸತಿ ಶಾಲೆಗಳಿಗೆ ದಾಖಲು ಮಾಡಿ ಮತ್ತೆ ಇದೇ ಮಕ್ಕಳು ಬಾಲಮಂದಿರದಲ್ಲೇ ಇರುವುದಾಗಿ ಹಾಜರಾತಿ ಪುಸ್ತಕದಲ್ಲಿ ಹೆಸರು ನಮೂದನೆ ಮಾಡಿ ಈ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಸಂಸ್ಥೆಯಲ್ಲಿ ನಿಯಮನುಸಾರ ನಿರ್ವಹಿಸಬೇಕಾದ ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಹಾಗೂ ಮಕ್ಕಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಂಡಿಲ್ಲ ಎಂಬ ಕಾರಣಗಳಿಗಾಗಿ ಬಾಲಮಂದಿರದ ಅಧೀಕ್ಷಕಿ ಸತ್ಯಪ್ರೇಮ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.