ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ..? – ಎನ್ ಕೆ ಹನುಮಂತಯ್ಯ
ನಮ್ಮ ಚಿತ್ರಕ್ಕೆ ಮೂಗು, ಮೂತಿ ತೀಡದೆ ಬೆನ್ನಷ್ಟೇ ಬರೆವ ವ್ಯವಸ್ಥೆಯನ್ನು ಎದುರಿಸುವುದು ಹೇಗೆ? ಎಂಬ ಪ್ರಶ್ನೆಯ ಮೂಲಕ ಬಾಬ್ ಮಾರ್ಲಿ ಪ್ರಂ ಕೋಡಿಹಳ್ಳಿ ನಾಟಕ ತೆರೆದುಕೊಳ್ಳುತ್ತದೆ.
ಹಾಗೇ ನೋಡಿದರೆ ಬಾಬ್ ಮಾರ್ಲಿ ಪ್ರಂ ______ ಈ ಬಿಟ್ಟ ಸ್ಥಳವನ್ನು ಯಾವ ಊರಿನ ಹೆಸರಾಕಿದರೂ, ಮುಂದುವರೆದು ಬಾಬ್ ಮಾರ್ಲಿ ಪ್ರಂ ಭಾರತ ಅಂತ ತುಂಬಿದರೂ ನಡೆಯುತ್ತದೆ.
ಊರು ಅಸ್ಪೃಶ್ಯತೆಯನ್ನು ಪೋಷಿಸಿ ದೂರವಿಟ್ಟಿತು. ಆದರೆ ಅಂತಹ ಊರುಗಳಿಗೆ ಅಸ್ಮಿತೆಯನ್ನು ನೀಡಿದ್ದು ಅದರಿಂದ ಬಿಡಿಸಿಕೊಂಡವರು. ಊರೊಟ್ಟಿನ ಸಂಬಂಧಗಳು ಎಂದರೆ ಏನು ಎಂಬ ಪ್ರಶ್ನೆಯನ್ನು ಎದುರುಗೊಳ್ಳುವುದೇ ಇಂಥ ನೆಲೆಯ ಮೂಲಕ.
ಕೂತುಣ್ಣುವ ವಿಚಾರಗಳು ನಮ್ಮ ಮುಂದೆ ಅಪಾಯಗಳನ್ನು ತಂದೊಡ್ಡಿರುವ ಕಾಲದಲ್ಲಿ ಶಾಲೆ ಕಾಲೇಜಿನಂಥ ಸಾರ್ವಜನಿಕ ಸಂಸ್ಥೆಗಳು, ವೆಜ್ ಓನ್ಲಿ ಎಂದು ಬಾಡಿಗೆಯ ಮನೆಯನ್ನು ಮೀಸಲಿಡುವ, ಬಾಡು ತಿಂದರೆ ಬಲಿಗಾಗಿ ಕಾದಿರುವ ವ್ಯಗ್ರ ಮನಸ್ಸುಗಳು ಒಂದಷ್ಟು ಮುಟ್ಟಿ ನೋಡಿಕೊಳ್ಳಲಿ ..
ನಮ್ಮ ತಲೆಮಾರಿನವರು ಅನುಭವಿಸಿರುವ ಮುಟ್ಟಿಸಿಕೊಳ್ಳದಿರುವ ಸಂಕಟ, ಉತ್ತಮರ ಮನೆಯಲ್ಲಿ ಟಿವಿ ನೋಡುವ ಪ್ರಸಂಗಗಳು, ದೇವದಾಸಿಗಳ ದಾಖಲಾಗದ ಸಂಕಟಗಳು, ಮಿಂಚುಳಗಳು. ಆಧುನಿಕ ಬೆಳಕಿನ ಅಬ್ಬರದಲ್ಲಿ ಬೆಳಕು ತೋರುವ ಮಿಂಚುಳಗಳು ಮರೆಯಾಗಿವೆ ಎನ್ನುವುದೇ ದೊಡ್ಡ ರೂಪಕ. ಆ ಮಿಂಚುಗಳ ಬೆನ್ನತ್ತಿ ಹೊರಟಿರುವ ಕೆ.ಪಿ. ಲಕ್ಷ್ಮಣ್, ವಿ ಎಲ್, ಚಂದ್ರಶೇಖರ್, ಶ್ವೇತ, ಡಿಂಗ್ರಿ, ಮಂಜು … ಎಲ್ಲರ ನಡೆಗಳಿಗು ಶರಣು.
ನಡೆ ಶುರುವಾಗಿದೆ ಆಕಾಶದ ತುಂಬೆಲ್ಲಾ ಮಿಂಚು ಹುಳಗಳೇ ನಕ್ಷತ್ರಗಳನ್ನು ಮರೆಮಾಚುವಷ್ಟು ಪ್ರಕಾಶಿಸುತ್ತಿವೆ. ಸೂರಪ್ಪನೇ ಮಿಂಚುಳಗಳ ಸಂದಿಯಲ್ಲಿ ಇಣುಕಿ ನೋಡುತ್ತಿದ್ದಾನೆ..
ಇಂಥದ್ದನ್ನು ಆಯೋಜಿಸಿದ್ದು ಡ್ಯಾಗೇರಹಳ್ಳಿ ವಿರೂಪಾಕ್ಷ ಮತ್ತು ತಂಡ. ಅವರ ಶ್ರಮ ನಿನ್ನೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮೆರುಗಲ್ಲಿ ಕಾಣುತ್ತಿತ್ತು.
ಡಾ.ರವಿಕುಮಾರ್ ನಿ.ಹ, ಲೇಖಕರು