ತುಂಬಾಡಿ ಹೊಸಕೆರೆ ನೋಡಲು ಹೋಗಿದ್ದಾಗ ಕೆರೆಗೆ ಕಾಲು ಜಾರಿ ಬಿದ್ದು ತಂದೆ-ಮಗಳು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ತುಂಬಾಡಿಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಒಂದೇ ಕುಟುಂಬದ ತಂದೆ ಮಗಳು ಇಬ್ಬರು ಕಾಲು ಜಾರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು ಮೃತರನ್ನು 35 ವರ್ಷದ ಪಿರ್ದೋಸ್ ಮತ್ತು ಆಕೆಯ 6 ವರ್ಷದ ಮಗಳು ಅಹಿಮಾ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಶಿವಾಜಿನಗರ ನಿವಾಸಿಗಳಾದ ಫೀರ್ದೋಸ್ ಕುಟುಂಬ ಕೊರಟಗೆರೆ ಪಟ್ಟಣದ ಗಿರಿನಗರದ ಸಂಬಂಧಿಕರ ಮನೆಗೆ ಬಂದಿದ್ದರು. ತುಂಬಾಡಿ ಹೊಸಕೆರೆ ಕೋಡಿ ಬಿದ್ದಿರುವುದನ್ನ ನೋಡಲು ಆರು ಜನರು ಹೋಗಿದ್ದರು ಎಂದು ಹೇಳಲಾಗಿದೆ.
ತುಂಬಾಡಿ ಕೆರೆ ಕೋಡಿ ಬಿದ್ದ ನೀರಿನ ಸಮೀಪ ಮಗಳು ಕಾಲು ಜಾರಿ ಬಿದ್ದಿದ್ದಾಳೆ. ಇದನ್ನು ಕಂಡ ತಂದೆ ಫಿರ್ದೋಸ್ ಮಗಳನ್ನ ಉಳಿಸಲು ಹೋಗಿ ಆತನೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇಬ್ಬರು ಮುಳುಗುವುದನ್ನು ಕಂಡ ಮೃತ ಫೀರ್ದೋಸ್ ಮಡದಿ ನೀರಿನ ಒಳಗೆ ಇಳಿದಿದ್ದಾರೆ. ತಕ್ಷಣ ಅಲ್ಲಿದ್ದ ಸ್ಥಳಿಯರು ಮಹಿಳೆಯನ್ನು ಹೊರತಂದಿದ್ದಾರೆ. ನಂತರ ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ತಕ್ಷಣ ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಅಧಿಕಾರಿಗಳು ಇಬ್ಬರ ಶವವನ್ನ ಹೊರತೆಗೆದಿದ್ದಾರೆ.