Thursday, November 21, 2024
Google search engine
Homeಜಿಲ್ಲೆಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಡಿ.4 ರಿಂದ ಪಾದಯಾತ್ರೆ

ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಡಿ.4 ರಿಂದ ಪಾದಯಾತ್ರೆ

ರಾಮನಗರ ಮತ್ತು ಮಾಗಡಿಗೆ ಹೇಮಾವತಿ ನೀರು ಸರಬರಾಜು ಮಾಡಲು ಉದ್ದೇಶಿಸಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಹೇಮಾವತಿ ನೀರಾವರಿ ಹೋರಾಟ ಸಮಿತಿ ವತಿಯಿಂದ ಡಿ.4 ರಿಂದ 6 ರವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ನಾಯಕರು ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಸಾರ್ವಜನಿಕರು, ಸ್ವಯಂ ಪ್ರೇರಿತವಾಗಿ ಭಾಗವಹಿಸಲಿದ್ದು, ಇದನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.
ಜಿಲ್ಲೆಗೆ ನಿಗದಿಯಾಗಿರುವ ಹೇಮಾವತಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ನಮ್ಮ ಜಿಲ್ಲೆಯ ಪಾಲಿನ ನೀರನ್ನು ಹರಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುನ್ನಾರ ನಡೆಸಿದ್ದು, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೇಮಾವತಿ ನಾಲಾ ವಲಯ, ಅಧಿಕಾರಿಗಳನ್ನು ಬೆದರಿಸುವ ಮೂಲಕ ಕಾಮಗಾರಿ ಆರಂಭಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಹೇಮಾವತಿ ನಾಲೆಯ 79ನೇ ಕಿ.ಮೀ.ಯ ಕೆ.ರಾಂಪುರ ಗ್ರಾಮದಿಂದ ತುಮಕೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಡಿ.4, 5 ಮತ್ತು 6ರ ವರೆಗೆ ಪಾದಯಾತ್ರೆ ನಡೆಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಮಾವೇಸಗೊಂಡು ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಪಾದಯಾತ್ರೆಯಲ್ಲಿ 10ರಿಂದ 20 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದ್ದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗುವಂತೆ ಮಾಡುವುದು ನಮ್ಮ ಹೋರಾಟದ ಉದ್ದೇಶವಾಗಿದ್ದು, ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಕೆ.ರಾಂಪುರದಿಂದ ಆರಂಭಗೊಳ್ಳುವ ಪಾದಯಾತ್ರೆ ಪ್ರತಿನಿತ್ಯ 18 ರಿಂದ 20 ಕಿ.ಮೀ. ಸಾಗಿ ಗುಬ್ಬಿಯಲ್ಲಿ ವಾಸ್ತವ್ಯ ಮಾಡಿ ನಂತರ ಅಲ್ಲಿಂದ ಮಾರನೆ ದಿನ ಮಲ್ಲಸಂದ್ರ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡಿ ಮಾರನೆ ದಿನ ತುಮಕೂರು ಪ್ರವೇಶಿಸುತ್ತಿದೆ ಎಂದು ತಿಳಿಸಿದ ಅವರು ಜಿಲ್ಲಾಧಿಕಾರಿ ಕಛೇರಿ ಮುಂದೆ ಜಮಾವಣೆಗೊಂಡು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಹೆಚ್. ಪಂಚಾಕ್ಷರಯ್ಯ ಎ.ಗೋವಿಂದರಾಜು, ಧನಿಯಾಕುಮಾರ್, ಪ್ರಭಾಕರ್, ದಿಲೀಪ್ ಕುಮಾರ್, ಪ್ರಸನ್ನ ಬಸವರಾಜು, ವಿನಯ್ ಕುಮಾರ್, ಪ್ರಕಾಶ್, ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular