ಅಪರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಅಲ್ಲಪ್ಪನವರು ಈಗ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹಲವು ವರ್ಷಗಳ ಕಾಲ ಕಂದಾಯ ಇಲಾಖೆಯ ವಿವಿಧ ಸ್ಥರಗಳಲ್ಲಿ ಕರ್ತವ್ಯ ನಿರ್ವಹಿಸಿ, ಐದಾರು ವರ್ಷಗಳ ಕಾಲ ಅಪರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ದಲಿತ ಸಮುದಾಯಕ್ಕೆ ಸೇರಿದ ಅಲ್ಲಪ್ಪನವರು ಸೇವೆಯಿಂದ ನಿವೃತ್ತರಾದ ನಂತರ ತಾಲೂಕಿನ ನೀರಗುಂದ ಮತ್ತು ಅಜ್ಜೇನಹಳ್ಳಿಯ ಗ್ರಾಮದ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಅದೂ ಸಾಮಾನ್ಯ ವರ್ಗದಿಂದಲೇ ಆಯ್ಕೆಯಾಗಿದ್ದರು.
ಲೋಕಮ್ಮನಹಳ್ಳಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ಟಿ.ಆರ್.ಕೆಂಪೇಗೌಡ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ನೀರಗುಂದದ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದ ಆರ್.ಅಲ್ಲಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಲ್ಲಪ್ಪನವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಗ್ರೇಡ್ 2 ಅಧಿಕಾರಿಗಳಾದ ಸುಮತಿ ಘೋಷಿಸಿದರು.
17 ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯಿತಿಯ ಈ ಚುನಾವಣೆಯಲ್ಲಿ 9 ಸದಸ್ಯರು ಭಾಗವಹಿಸಿದ್ದರು. ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ವನಮಾಲ, ಸಹ ಸದಸ್ಯರಾದ ಗಂಗಾಧರಯ್ಯ, ಕೃಷ್ಣಪ್ಪ, ಎಂ.ಬಿ.ರೇಣುಕಪ್ಪ, ಪುಟ್ಟಲಕ್ಷ್ಮಮ್ಮ, ಕೋಮಲಾ, ಮಂಜುಳ, ಕೆಂಪೇಗೌಡ ಪಿಡಿಓ ಸುರೇಶ್ ಮುಖಂಡರಾದ ಶಶಿಧರ್, ಕಾಂತರಾಜು ಸೇರಿದಂತೆ ಮುಖಂಡರು ಅಭಿನಂದಿಸಿದರು.