ರಸ್ತೆ ಹಾಗೂ ರೈಲು ಸಾರಿಗೆಯನ್ನು ಇನ್ನಷ್ಟು ಸುಗಮ ಹಾಗೂ ಸುರಕ್ಷಿತವಾಗಿಸಲು ತುಮಕೂರು ನಗರದಲ್ಲಿ ರೈಲ್ವೇ ಇಲಾಖೆಯಿಂದ ಕ್ಯಾತ್ಸಂದ್ರ, ಬಡ್ಡಿಹಳ್ಳಿ, ಬಟವಾಡಿ ಪ್ರದೇಶಗಳಲ್ಲಿ 244.02 ಕೋಟಿ ರೂಗಳ ವೆಚ್ಚದಲ್ಲಿ 3 ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಬಟವಾಡಿ ರೈಲ್ವೇಗೇಟ್ ಬಳಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ನಗರದಲ್ಲಿ 3, ನಗರದ ಹೊರ ವಲಯದ ಹರಿಯೂರು (ಮಲ್ಲಸಂದ್ರ) ಬಳಿ 1, ಗುಬ್ಬಿ ತಾಲ್ಲೂಕಿನ ನಿಟ್ಟೂರು ರೈಲ್ವೇ ಸ್ಟೇಷನ್ ಬಳಿ 1 ಸೇರಿ ಒಟ್ಟು 5 ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ತುಮಕೂರು ನಗರದ ಕ್ಯಾತ್ಸಂದ್ರ ಸ್ಟೇಷನ್-ಮೈದಾಳ ಗೇಟ್ ನಡುವಿನ ಮೇಲ್ಸುತುವೆಗಾಗಿ 57.3 ಕೋಟಿ ರೂ., ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ದಳದ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ 89.03 ಕೋಟಿ ರೂ., ಬಟವಾಡಿ ಗೇಟ್ ಬಳಿ ಸೇತುವೆ ನಿರ್ಮಾಣಕ್ಕಾಗಿ 97.69 ಕೋಟಿ ರೂ., ಹರಿಯೂರು ರಸ್ತೆ ಬಳಿ ಮೇಲ್ಸೆತುವೆ ನಿರ್ಮಿಸಲು 55.99 ಕೋಟಿ ರೂ., ಹಾಗೂ ತುಮಕೂರು-ಮೈಸೂರು ರಸ್ತೆ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು 50.57 ಕೋಟಿ ರೂ. ಸೇರಿದಂತೆ 5 ಮೇಲ್ಸೆತುವೆಗಳ ನಿರ್ಮಾಣಕ್ಕೆ ಒಟ್ಟು 350 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.
ಬಟವಾಡಿ ಬಳಿ ನಿರ್ಮಿಸಲಿರುವ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಚರ್ಚಿಸಿದ ಅವರು, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಾಮಗಾರಿ ನಿರ್ಮಾಣ ಮಾಡಲಾಗುವುದು. ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಕಾಮಗಾರಿ ನಡೆಯುವ ಸ್ಥಳಕ್ಕೆ ಸಂಬಂಧಿಸಿದ ದಾಖಲೆ, ನೀರಿನ ಪೈಪ್ ಲೈನ್, ವಿದ್ಯುತ್ ಲೈನ್ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಇಂಜಿನಿಯರ್‌ಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ರೈಲ್ವೇ ಅಧಿಕಾರಿಗಳು ಹಾಜರಿದ್ದರು.