ಸಿದ್ದರಾಮಯ್ಯ ಪ್ರಾಮಾಣಿಕ ಮನುಷ್ಯ, ಹಣ ಸಂಪಾದನೆ ಮಾಡಲಿಲ್ಲ, ಜನ ಸಂಪಾದನೆ ಮಾಡಿದ್ದಾರೆ. ಅಲ್ಲಿ ಏನಾಗಿದೆ ಅಂದರೆ ನಾವು ಬಿಟ್ಟ ಮೇಲೆ ಸಿದ್ದರಾಮಯ್ಯ ಅವರ ಬಳಿ ಸಲಹೆಗಾರರೇ ಇಲ್ಲ ಎಂದು ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿದರು.
ತುಮಕೂರು ಜಿಲ್ಲೆಯ ತಿಪಟೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಇಬ್ರಾಹಿಂ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮೊದಲು 14 ಸೈಟ್ ಬೇಡಾ ತಗೊಂಡು ಬಿಡಿ. ನನ್ನ ಜಮೀನು ಹೌದೋ ಅಲ್ವೋ ತನಿಖೆ ಆದ ಮೇಲೆ, ಅದೇನು ತೀರ್ಮಾನ ಆಗುತ್ತೋ ಆಗಲಿ ಅಂತಾ ಅಂದು ಹೇಳಿಬಿಟ್ಟಿದ್ದರೆ ಯಾವ ತನಿಖೆ, ತೊಂದರೆ ಬರುತ್ತಿರಲಿಲ್ಲ. ಎಲ್ಲಾ ಮುಗಿದೇ ಹೋಗುತ್ತಿತ್ತು. ಆದರೆ ಸಿದ್ದರಾಮಯ್ಯ ಯಾರು ಎಂದು ಇಡೀ ರಾಜ್ಯಕ್ಕೆ ಗೊತ್ತು ಎಂದರು.
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ನನ್ನ ಸ್ನೇಹಿತರೇ. ಸ್ನೇಹ ಬೇರೆ, ಪಕ್ಷ ಬೇರೆ. ಇದೇ 29 ರಂದು ಶರಣರ ಸಭೆ ಕರೆದಿದ್ದೇನೆ. ಸಾಣೇಹಳ್ಳಿ ಶ್ರೀಗಳು, ದಿಂಗಾಲೇಶ್ವರ ಸ್ವಾಮಿಗಳು, ಮಹಿಮಾ ಪಾಟೀಲ್, ನಾಡಗೌಡರು, ನಾವೆಲ್ಲ ಕೂತು ತೀರ್ಮಾನ ಮಾಡುತ್ತೇವೆ. ಮುಂದಿನ ನಡೆ, ಯಾವ ಕಡೆ ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು.
ಆಗಸ್ಟ್ 29 ರಂದು ರಾಮಕೃಷ್ಣ ಹೆಗಡೆ ಜನ್ಮದಿನವನ್ನು ಗಾಂಧಿ ಭವನದಲ್ಲಿ ಆಚರಿಸುತ್ತಿದ್ದೇವೆ. ಅಂದು ಸಂಜೆ ತೀರ್ಮಾನ ಮಾಡುತ್ತೇವೆ ಒಟ್ಟಿನಲ್ಲಿ ಬಿಜೆಪಿ ರಾಜ್ಯದಲ್ಲಿ ಬರಬಾರದು ಎಂದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕರೆದರೆ ಹೋಗಲಿಕ್ಕೆ ನಾನು ಒಬ್ಬನೇ ಅಲ್ಲವಲ್ಲ. ನಾನು ಯಾವತ್ತು ಆನೆ ಸವಾರಿ ಕೇಳಲ್ಲ. ಕುದುರೇ ಸವಾರಿ ಕೇಳೋದು, ಆನೆ ಮೇಲೆ ಕುಳಿತರೆ ಪ್ರಯೋಜನವಿಲ್ಲ, ಅದು ಕರೆದುಕೊಂಡು ಹೋದ ಕಡೆ ಹೋಗಬೇಕು. ಅದೇ ಕುದುರೆ ಮೇಲೆ ಕುಳಿತರೆ ಲಗಾಮು ನಮ್ಮ ಕೈಲಿ ಇರುತ್ತದೆ. ನಮಗೆ ಬೇಕಾದ ಕಡೆ ಹೋಗಬಹುದು. ಹಾಗಾಗಿ ಸ್ನೇಹಿತರು-ಜನರು ಏನು ತೀರ್ಮಾನ ಮಾಡ್ತಾರೆ ನೋಡೋಣ. ನನಗೆ ಅಧಿಕಾರದ ಆಸೆ ಇಲ್ಲಾ, ಎಲ್ಲಾ ನೋಡಿ ಆಗಿದೆ. ನನಗೆ ಉತ್ತಮವಾದ ಜನ ಬರಬೇಕು ಎಂದರು.