ಜಾತ್ರೆಯಲ್ಲಿ ಊಟ ಸೇವಿಸಿದ ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದ್ದು ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರ ಗ್ರಾಮದಲ್ಲಿ ನಡೆದಿದೆ.
ವಾಂತಿ ಭೇದಿಯಿಂದ ಮೃತಪಟ್ಟವರನ್ನು 90 ವರ್ಷದ ಗಿರಿಯಮ್ಮ, 45 ವರ್ಷದ ಕಾಟಮ್ಮ ಮತ್ತು ಬುಳ್ಳಸಂದ್ರ ಗ್ರಾಮದ 85 ವರ್ಷದ ತಿಮ್ಮಕ್ಕ ಎಂದು ಗುರುತಿಸಲಾಗಿದೆ. ಗಿರಿಯಮ್ಮ ಮತ್ತು ತಿಮ್ಮಕ್ಕ ಬುಳ್ಳಸಂದ್ರ ಗ್ರಾಮದವರಾದರೆ, ಕಾಟಮ್ಮ ಮಡಕಶಿರಾ ತಾಲೂಕಿನ ಸಿದ್ದಗಿರಿ ಗ್ರಾಮದವರೆಂದು ಹೇಳಲಾಗಿದೆ.
ಶನಿವಾರ ಗ್ರಾಮದಲ್ಲಿ ಮುತ್ತುರಾಯಸ್ವಾಮಿ, ಕರಿಯಮ್ಮ ದೇವರ ಹರಿಸೇವೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಊಟ ಮಾಡಿದ ಬಳಿಕ ಕೆಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು ಮೂವರು ಮೃತಪಟ್ಟಿದ್ದಾರೆ. ಆದರೆ ಇವರಲ್ಲಿ ತಿಮ್ಮಕ್ಕ ಮತ್ತು ಗಿರಿಯಮ್ಮ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಇನ್ನು 11 ಮಂದಿ ಚಿಕಿತ್ಸೆ ಪಡೆಯುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬುಳ್ಳಸಂದ್ರದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಲಿನಿಕ್ ತೆರೆದು ವಾಂತಿ ಭೇದಿಯಿಂದ ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥರಾದ ಇಬ್ಬರನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.