Monday, September 16, 2024
Google search engine
Homeಜಿಲ್ಲೆಮಾನಸಿಕ ಬದಲಾವಣೆಯಿಂದ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ

ಮಾನಸಿಕ ಬದಲಾವಣೆಯಿಂದ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ

ಈ ದೇಶದ ಆರ್ಥಿಕತೆ ಅಸಮಾನತೆಯಿಂದ ಕೂಡಿದೆ. ಹಾಗೆಯೇ ಈ ದೇಶದ ಶ್ರೇಣಿಕೃತ ಜಾತಿ ಪದ್ದತಿಯನ್ನು ನೋಡಿದಾಗ ಮೇಲು ಮತ್ತು ಕೆಳಜಾತಿಗಳ ಸಂಬಂಧಗಳು ಅಸಮಾನವಾಗಿದೆ. ಇದು ಚಾರಿತ್ರಿಕವಾದ ತಪ್ಪು. ಈ ತಪ್ಪನ್ನು ಈಗ ನಾವು ತಿದ್ದಿಕೊಳ್ಳಬಹುದು ಎಂದು ಕವಿ ಹಾಗೂ ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಹೇಳಿದರು.

ತುಮಕೂರು ನಗರದ ಟೌನ್‌ಹಾಲ್ ವೃತ್ತದ ಸಮೀಪವಿರುವ ಐಎಂಎ ಹಾಲ್‌ನಲ್ಲಿ ಭಾನುವಾರ ನಡೆದ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಅವರು ಅನುವಾದಿಸಿರುವ ಆ ಲಯ, ಈ ಲಯ ನಾಟಕ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಜಾತಿ ಪದ್ದತಿಯು ಕಾನೂನು ಪ್ರಕಾರ ನಿಷೇಧವಾಗಿದೆ. ಆದರೆ ಪ್ರತೀತಿಯಲ್ಲಿದೆ. ಜಾತಿ ಪದ್ದತಿಯ ಭೌತಿಕ ಬದಲಾವಣೆಗಿಂದ ಮಾನಸಿಕ ಬದಲಾವಣೆ ಮುಖ್ಯ. ಇದು ಸಾಹಿತ್ಯದ ಸೃಜನಶೀಲತೆಯ ರಂಗಭೂಮಿಯ ಪ್ರಮುಖ ಕರ್ತವ್ಯ. ಇದು ಗೊತ್ತಿಲ್ಲದೇ ಇರುವ ಯಬಡಾಗಳೆಲ್ಲ ಏನೇನೋ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ ಎಂದು ಟೀಕಿಸಿದರು.

ಹಿಂದೆ ಜನಾಂಗವಾದದ ವಿರುದ್ಧ ಹೋರಾಟ ಮಾಡಿದವರೆಲ್ಲ ಈಗ ಶೋಷಕ ವರ್ಗಕ್ಕೆ ಸೇರಿದ್ದಾರೆ. ಈ ಪರಿಸ್ಥಿತಿ ಚಲನಶೀಲವಾಗಿದೆ. ಈ ಚಲನಶೀಲತೆಯಲ್ಲಿ ಆದರ್ಶವಾದಿ ಯುವಕರು, ಯುವತಿಯರು ಯಾವ ರೀತಿ ತ್ಯಾಗ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಶೋಷಕ ಮತ್ತು ಶೋಷಿತರ ನಡುವೆ ಇರುವ ಅಡ್ಡಗೆರೆ ಈಗ ಬಿಳಿಯರು, ಕರಿಯರು ಎಂದು ಹೇಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಕಳವಳ ವ್ಯಕ್ತಪಡಿಸಿದರು.

ಆ ಲಯ, ಈ ಲಯ ಅನುವಾದ ನಾಟಕ ಕೃತಿ ಚನ್ನಾಗಿ ಮೂಡಿ ಬಂದಿದೆ. ಈ ನಾಟದ ಪಾತ್ರಗಳನ್ನು ಭಾರತ ಪಾತ್ರಗಳನ್ನಾಗಿ ಬದಲಾಯಿಸಿದರೆ ಇದು ಭಾರತದ್ದೇ ಎನ್ನುವಷ್ಟ ಮಟ್ಟಿಗೆ ಅನುವಾದಿಸಲಾಗಿದೆ. ಹೀಗಾಗಿ ಕೃತಿಕಾರ ನಟರಾಜ್ ಹೊನ್ನವಳ್ಳಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರಾಜ, ಪಾಳ್ಳೇಗಾರ, ಅವರ ಪತ್ನಿಯರು ನಡುವೆ ಕಾಮ, ಪ್ರೇಮ ಮತ್ತು ಕ್ರೋಧದವೇ ಗಿರಿಕಿ ಹೊಡೆಯುತ್ತಿದೆ. ಕಾಳಿದಾಸನನ್ನು ಒಬ್ಬ ಶೃಂಗಾರ ಕವಿ ಎಂದು ಬಂಧಿಸಲ್ಪಟ್ಟಿದ್ದೇವೆ. ಸುಖೀರಾಜ್ಯದಲ್ಲಿ ಕವಿಗಳು ಆರಾಮವಾಗಿರಬಹುದು. ಆದರೆ ದುಃಖದ ಸನ್ನಿವೇಶದಲ್ಲಿ ಕವಿಗಳು ಸುಮ್ಮನೆ ಕೂರುವಂತಿಲ್ಲ. ಅದಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.

ನಮ್ಮಲ್ಲಿ ಎರಡು ಮಾರ್ಗಗಳಿವೆ. ಒಂದು ಅಂಬೇಡ್ಕರ್ ಮಾರ್ಗ ಮತ್ತೊಂದು ಗಾಂಧೀ ಮಾರ್ಗ. ಈ ಮಾರ್ಗಗಳನ್ನು ಮುಖಾಮುಖಿಯಾಗಿಸಿ ಪರಸ್ಪರ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ರಾಜಕಾರಣದ ಬಿಕ್ಕಟ್ಟು. ಸಂಸತ್ತಿನಲ್ಲಿ ಇದೇ ಚರ್ಚೆಯಾಗುತ್ತಿದೆ. ನಮಗೆ ಗೊತ್ತಿಲ್ಲದೆ ಪುರೋಹಿತಶಾಹಿಯ ಪಾಳೇಗಾರಿಕೆ ಪದ್ದತಿಯ ಸೆಂಗೋಲ್ ಅನ್ನು ಸಂಸತ್ತಿನಲ್ಲಿ ಇಡಲಾಗಿದೆ. ಇದರ ಕುರಿತು ಒಬ್ಬ ಸಾಮಾನ್ಯನ ಪ್ರತಿಕ್ರಿಯೆ ಏನಿರಬಹುದು ಎಂದು ಕೇಳಿದರು.

ನಮಗೆ ಗೊತ್ತಿಲ್ಲದೆ ನಾವು ಪ್ರಜಾಪ್ರಭುತ್ವದ ವಿರೋಧಿಗಳಾಗಿರುತ್ತೇವೆ. ಊಳಿಗಮಾನ್ಯ ಪದ್ದತಿಯ ಆರಾಧಕರಾಗಿರುತ್ತೇವೆ. ರಾಜಶಾಯಿಯ ಪಕ್ಷಪಾತಿಗಳಾಗಿರುತ್ತೇವೆ. ಇದನ್ನು ಆಫ್ರಿಕಾದ ಸಾಹಿತ್ಯ ಪ್ರಶ್ನೆ ಮಾಡುತ್ತಾ ಹೋಯಿತು. ನ್ಯಾಯಾಲಯದಲ್ಲಿ ಸತ್ಯ ಮೇವ ಜಯತೇ ಅಂತ ಬರೆದಿರುತ್ತಾರೆ. ಆದರೆ ಇದು ಸರಿಯಲ್ಲ. ಅಲ್ಲಿ ಸಾಕ್ಷಿಮೇವ ಜಯತೇ ಇರಬೇಕಿತ್ತು. ಸಾಕ್ಷಿ ಇದ್ದರೆ ಅಲ್ಲಿ ನ್ಯಾಯ ಸಿಗೋದು. ಇಲ್ಲದಿದ್ದರೆ ನ್ಯಾಯ ಸಿಗೊಲ್ಲ ಎಂದು ಅಭಿಪ್ರಾಯಪಟ್ಟರು.

ಕೃತಿಯ ಕುರಿತು ತುಮಕೂರು ವಿವಿ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿದರು. ರಂಗನಿರ್ದೇಶಕಿ ಹೆಚ್.ಕೆ.ಶ್ವೇತಾರಾಣಿ, ಚರಕ ಆಸ್ಪತ್ರೆಯ ವೈದ್ಯ ಡಾ.ಬಸವರಾಜು ಮಾತನಾಡಿದರು.

ಗಂಗಲಕ್ಷ್ಮಿ ಪ್ರಾರ್ಥಿಸಿದರು. ತರಂಗಿಣಿ ನಿರೂಪಿಸಿದರು. ಆ ಲಯ ಈ ಲಯ ಕೃತಿ ಕರ್ತೃ ನಟರಾಜ ಹೊನ್ನವಳ್ಳಿ ಮಾತನಾಡಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular