ವಕೀಲರ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದೆ ಬರಬೇಕು. ಉನ್ನತ ಶಿಕ್ಷಣ ಪಡೆದು ಮೇಲೆ ಬರಬೇಕು ಎಂದು ತುಮಕೂರು ಜಿಲ್ಲಾ ವಕೀಲರ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ನವೀನ್ ನಾಯಕ್ ಕರೆ ನೀಡಿದರು.
ತುಮಕೂರಿನ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲಾ ವಕೀಲರ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ 11ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಬೇಕು. ಅವರು ಒಳ್ಳೆಯ ಕೆಲಸಗಳಿಗೆ ಹೋಗುವಂತೆ ನೋಡಿಕೊಳ್ಳಬೇಕು ಎಂದರು.
ವಕೀಲರು ತಮಗೆ ಅವಶ್ಯಕತೆ ಇದ್ದಾಗ ಬ್ಯಾಂಕ್ ನಿಂದ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬೇಕು. ಅದನ್ನು ಸಕಾಲಕ್ಕೆ ಸರಿಯಾಗಿ ಮರುಪಾವತಿಸುವ ಮೂಲಕ ಬ್ಯಾಂಕ್ ಅಭಿವೃದ್ದಿಗೆ ಕಾರಣವಾಗಬೇಕು ಎಂದು ಹೇಳಿದರು.
ನಮ್ಮ ಸಹಕಾರಿ ಬ್ಯಾಂಕ್ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಕಾರಣವಾಗಿದೆ. ಕಡಿಮೆ ಬಡ್ಡಿಯಲ್ಲಿ ವಕೀಲರ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಹೆಚ್ಚು ಸಹಕಾರಿಯಾಗಿದೆ ಎಂದರು.
ಉಪಾಧ್ಯಕ್ಷ ಟಿ.ಆರ್.ನಾಗೇಶ್, ನಿರ್ದೇಶಕರಾದ ಎಚ್.ವಿ.ಮಲ್ಲಿಕಾರ್ಜುನಯ್ಯ, ಜಿ.ಎಸ್.ಹನುಮಂತರಾಯಪ್ಪ, ಬಿ.ಎಸ್.ರಾಮಕೃಷ್ಣಯ್ಯ, ಕೆ.ಎಸ್. ಕಾಮೇಗೌಡ, ಎನ್.ಆರ್.ರವಿ, ಎ.ಕಲೀಂ ಉಲ್ಲಾ, ಕೆ.ಎನ್.ಚಿಕ್ಕಣ್ಣ, ಎಸ್.ಪುಟ್ಟರಾಜಣ್ಣ, ಕೆ. ಜಯಂತಿ, ಎಚ್.ಸಿ.ಅನಿತಾ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 12 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.