ತುಮಕೂರು:ತಾತ್ವಿಕ ಆಯಾಮಗಳನ್ನು ಸೃಜನಶೀಲ ಬರಹದಲ್ಲಿ, ಕಥಾ ನಿರೂಪಣೆಯ ತಂತ್ರದಲ್ಲಿ ತೊಡಗಿಸಲು ಪ್ರಯತ್ನಿಸಿದ ಕುವೆಂಪು ಗದ್ಯ ಪ್ರಕಾರದ ಹಾಗೂ ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳ ರಸಾನುಭೂತಿಯನ್ನು ಸಾಹಿತ್ಯದೊಳಗೆ ತಂದು ಎಷ್ಟು ಸಫಲರಾದರು ಎಂದು ವಿಮರ್ಶಾತ್ಮಕ ದೃಷ್ಟಿಯಲ್ಲಿ ಚರ್ಚಿಸಬೇಕಿದೆ ಎಂದು ಹಿರಿಯ ಸಂಶೋಧಕ ಹಾಗೂ ಸಾಹಿತ್ಯ ವಿಮರ್ಶಕ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠವು ಬುಧವಾರ ಆಯೋಜಿಸಿದ್ದ ‘ಕುವೆಂಪು ಕಾವ್ಯತತ್ವ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
20ನೆಯ ಶತಮಾನದ ಒಂದು ಹೊಸ ಎಚ್ಚರವನ್ನು ಓದುಗರ ಮುಂದಿಟ್ಟ ಕುವೆಂಪು ಅವರು ಬೌದ್ಧ ಧರ್ಮದ ಪರಿಕಲ್ಪನೆಯನ್ನು 1936ರ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಧರ್ಮದ ನೈತಿಕ ಆಯ್ಕೆಯ ವಿಚಾರವನ್ನು ಪ್ರತಿಮಾತ್ಮಕವಾಗಿ ಚಿತ್ರಿಸಿದ್ದಾರೆ. ನವ ಸಮುದಾಯದ ಅನ್ವೇಷಣೆಯ, ಆಧುನಿಕ ಸಂದರ್ಭದಲ್ಲಿನ ಸಮುದಾಯದ ಪ್ರಶ್ನೆಯ ಸೂತ್ರಪ್ರಾಯವಾದ ಕೊಂಡಿ ಅವರ ಸಾಹಿತ್ಯದಲ್ಲಿದೆ ಎಂದು ತಿಳಿಸಿದರು.
ವ್ಯವಸ್ಥೆಯನ್ನು ಬದಲಿಸುವ ಬರೆವಣಿಗೆಯ ಸಾಮ್ಯತೆಯನ್ನು ಕುವೆಂಪು ಮತ್ತು ಬೇಂದ್ರೆಯವರಲ್ಲಿ ಕಾಣಬಹುದು. ಮೇಲು ಧರ್ಮದ ಬರಹಗಾರರಿಗೆ ಧಾರ್ಮಿಕವಾಗಿ ಬಂದಿರುವ ಕಾವ್ಯತತ್ವ, ಸಿದ್ಧಾಂತಗಳು ನಿರ್ಲಕ್ಷಿತ ಶೂದ್ರ ಸಮುದಾಯದ ಕುವೆಂಪು ಅವರಿಗೆ ಸ್ವಯಾರ್ಜಿತವಾಗಿತ್ತು ಎಂದರು.
ಕುವೆಂಪು ಅವರಿಗಿದ್ದ ಮಲೆನಾಡಿನ ಪ್ರಕೃತಿಯ ಅನುಭವ, ಜಾತಿ ಮತ್ತು ಶಿಕ್ಷಣದ ಮಹತ್ವ, ವರ್ತಮಾನ ಕಾಲದ ಚಿಂತನೆಗಳು ಅವರ ಕಾವ್ಯಗಳ ಪ್ರೇರಣೆಯಾಗಿತ್ತು. ಕುವೆಂಪು ಅವರ ಕಾವ್ಯತತ್ವ ಅರಿಯಲು ಅನುಭೈವಿಕ ದೃಷ್ಟಿ ಅಗತ್ಯ ಎಂಬುದನ್ನು ವಿಮರ್ಶಕರು ಈಗಾಗಲೇ ಜಗತ್ತಿಗೆ ತಿಳಿಸಿದ್ದಾರೆ ಎಂದರು.
ನಿಸರ್ಗದ ಮೇಲೆ ಕುವೆಂಪು ಅವರಿಗೆ ಅಲೌಕಿಕ ಆಯಾಮದ ದೃಷ್ಟಿಯಿತ್ತು. ಅವರು ನಿಸರ್ಗಾನುಭಾವಿ ಎನ್ನುವುದು ಪೂರ್ಣ ಸತ್ಯವಲ್ಲ. ಅವರ ನಿಸರ್ಗದ ವರ್ಣನೆ ಎಂದರೆ ಅನುಭವವನ್ನು ಅನುಭಾವದಲ್ಲಿ ಇಟ್ಟು ನೋಡುವುದು. ಕಲೆಯ ಮೂಲಕ ಪ್ರಕೃತಿಯಲ್ಲಿರುವ ಅರಾಜಕತೆಯನ್ನು ಎತ್ತಿತೋರಿಸುವುದು. ಅಲೌಕಿಕ ಸ್ವರೂಪವನ್ನು ಪ್ರಕೃತಿದತ್ತ ಮಾಡುವ ಭಾಷೆ ಕುವೆಂಪು ಅವರದು ಎಂದು ತಿಳಿಸಿದರು.
ಧರ್ಮ ಮತ್ತು ಧಾರ್ಮಿಕತೆ ನಡುವಿನ ವ್ಯತ್ಯಾಸವನ್ನು ನಿಸರ್ಗ ಕವನಗಳಲ್ಲಿ ಕಟ್ಟಿಕೊಟ್ಟರು. ಸಿದ್ಧವಾದ ತಾತ್ವಿಕ ಹಿನ್ನೆಲೆ ಇಲ್ಲದಿರುವ ಕಾರಣ ಸಾಹಿತ್ಯದ ಸ್ವಂತ ದೇವರನ್ನು ಸೃಷ್ಟಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್, ಕುವೆಂಪು ಅವರು ಸಾಹಿತ್ಯ ಕ್ಷೇತ್ರದ ಆಲದಮರ. ದಲಿತ ಸಾಹಿತ್ಯಕ್ಕೆ ಚಾಲನೆ ಕೊಟ್ಟವರು ಕುವೆಂಪು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ವಿವಿಯ ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ.ಗೀತಾ ವಸಂತ, ಕುವೆಂಪು ಅವರ ಬದುಕಿನ, ಸಾಹಿತ್ಯದ, ಸಾಮಾಜಿಕ, ಕಾವ್ಯಾತ್ಮಕ ಚಿಂತನ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲೇ ಪರಿಚಯಿಸುವ ಸಲುವಾಗಿ ಇಂಥ ವಿಶೇಷ ಉಪನ್ಯಾಸಗಳು ಅವಶ್ಯಕ ಎಂದರು.
ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ.ಶೆಟ್ಟಿ, ಲೇಖಕ ಪದ್ಮಪ್ರಸಾದ್, ಕಥೆಗಾರ ಮಿರ್ಜಾ ಬಷೀರ್ ಹಾಜರಿದ್ದರು.