ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿಗೆ ಹೇಮಾವತಿ ನೀರಿ ತೆಗೆದುಕೊಂಡು ಹೋಗಲು ನಿರ್ಮಿಸುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಕೇನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು, ಜಿಲ್ಲೆಗೆ ನಿಗದಿಪಡಿಸಿರುವ ನೀರನ್ನು ಸಂಪೂರ್ಣವಾಗಿ ಹರಿಸಬೇಕು ಎಂದು ಒತ್ತಾಯಿಸಿ ಡಿ.7 ಸಂಯುಕ್ತ ಕಿಸಾನ್ ಕರ್ನಾಟಕ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಕಪ್ಪುಪಟ್ಟಿ ಧರಿಸಿ, ಪ್ರತಿಭಟನಾ ಧರಣಿಯನ್ಬು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿವೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಹೋರಾಟ ಸಮಿತಿಯ ಸಿ.ಯತಿರಾಜು, ತುಮಕೂರು ಶಾಖಾ ನಾಲೆಯಿಂದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಏಕಾಏಕಿ ಆರಂಭಿಸಿ ಜಿಲ್ಲೆಯ ಜನರಲ್ಲಿ, ಮುಖ್ಯವಾಗಿ ರೈತರಿಗೆ ತೀವ್ರವಾದ ಆತಂಕವನ್ನು ಸರಕಾರ ಸೃಷ್ಟಿ ಮಾಡಿದೆ. ತುಮಕೂರು ಜಿಲ್ಲೆಯ ಹೆಚ್ಚು ಕಡಿಮೆ ಎಲ್ಲಾ ತಾಲೂಕುಗಳ ರೈತರು ಮತ್ತು ನಾಗರಿಕರು ಕುಡಿಯುವ ನೀರಿಗೆ ನೀರಾವರಿಗೆ ಹೇಮಾವತಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಹೇಮಾವತಿ ನೀರನ್ನು ನೆಚ್ಚಿಕೊಂಡೇ ಕೃಷಿ ಮತ್ತು ಬದುಕನ್ನು ರೂಪಿಸಿಕೊಂಡಿದ್ದಾರೆ.
ಹೇಮಾವತಿಯ ನೀರಿನಿಂದ ಕೆರೆ ತುಂಬಿಸದಿದ್ದರೆ ಅದರ ಮೇಲೆ ಅವಲಂಬಿತವಾದ ತೆಂಗು, ಅಡಿಕೆ ಇನ್ನಿತರ ಬೆಳೆಗಳು ಸರ್ವನಾಶವಾಗುತ್ತವೆ. ಮಾಗಡಿಗೆ ಹೇಮಾವತಿ ನೀರು ಹರಿಸಲು ಯಾರಿಗೂ ಅಭ್ಯಂತರವಿಲ್ಲ. ಅದಕ್ಕಾಗಿ ತುಮಕೂರಿನ ರೈತರೂ ಸಹ ಹೋರಾಟಕ್ಕೆ ಕೈಜೋಡಿಸಲು ಸಿದ್ದ. ಆದರೆ ತುಮಕೂರಿನ ಶಾಖಾ ನಾಲೆಯಿಂದ ನೀರು ತೆಗೆದುಕೊಂಡು ಹೋಗುವುದರ ಬಗ್ಗೆಯಷ್ಟೇ ವಿರೋಧ. ಏಕೆಂದರೆ ನೀರಿನ ಹಂಚಿಕೆಯ ವ್ಯತ್ಯಯವು ತೀವ್ರವಾದ ಕೃಷಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂಬ ಆತಂಕವನ್ಬು ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೊಂವಿಂದರಾಜು ಮಾತನಾಡಿ, ಈಗಾಗಲೇ ಶಾಖಾ ನಾಲೆಯಿಂದ ಕುಣಿಗಲ್‌ರೆಗೂ ಹೇಮಾವತಿ ನೀರು ಹೋಗುತ್ತಿದೆ. ಇತ್ತೀಚಿಗೆ ಕೋಟ್ಯಂತರ ಹಣವನ್ನು ಮೂಲ ನಾಲೆಯ ಅಗಲೀಕರಣ ಮತ್ತು ನಾಲಾ ಅಭಿವೃದ್ಧಿ ಕೆಲಸ ನಡೆದಿದೆ. ಹಾಗಾಗಿ, ಅಲ್ಲಿಂದಲೇ ಮಾಗಡಿಗೆ ನೀರನ್ನು ತೆಗೆದುಕೊಂಡು ಹೋಗಬಹುದಿತ್ತು. ಅದು ಸುಲಭ ಮತ್ತು ಖರ್ಚೂ ಕಡಿಮೆ. ಆದರೆ ಅದಕ್ಕೆ ಬದಲಿಗೆ ಗುಬ್ಬಿಯಿಂದ ಹೊಸದಾಗಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಮತ್ತೆ ಕೋಟ್ಯಂತರ ಹಣ ದುಂದುವೆಚ್ಚವಾಗುತ್ತದೆ ಮತ್ತು ರೈತರ ಭೂಮಿ ಸ್ವಾಹ ಆಗುತ್ತದೆ.
ಅಂತಿಮವಾಗಿ ಇದರ ಹೊರೆ ಜನರ ಮೇಲೇ ಬೀಳುತ್ತದೆ.ನೀರಿನ ಹಂಚಿಕೆ ಬಹಳ ಸೂಕ್ಷ್ಮ ವಿಷಯ. ಜನರ ಬದುಕೇ ಪಣವಾಗಿರುತ್ತದೆ.ಅಂತಹ ವಿಷಯದಲ್ಲಿ ಸರಕಾರ ಕೇವಲ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡು ಜಿಲ್ಲೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ.ಜೊತೆಗೆ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರನ್ನು ಪರಸ್ಪರ ವಿರೋಧಿಗಳಂತೆ ಚಿತ್ರಿಸುವ ಅಪಾಯವೂ ಇದೆ. ಆದರೆ ಪ್ರಶ್ನೆಯೆಂದರೆ ತುಮಕೂರಿಗೆ ಅನ್ಯಾಯವಾಗಬಾರದು. ಪೈಪ್‌ಲೈನ್ ಜೋಡಣೆ ನಡೆಯುತ್ತಿರುವುದು ಸಂಘರ್ಷವೇರ್ಪಡುವ ಸಂಭವವಿದೆ. ಜೊತೆಗೆ ಎರಡೂ ಭಾಗಗಳ ರೈತರಿಗೆ, ಜನರಿಗೆ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು. ಇಂತಹ ಸೂಕ್ತವಾದ, ಭಾವನಾತ್ಮಕವಾದ ಬದುಕಿನ ಪ್ರಶ್ನೆಯೊಂದಿಗೆ ಬೆರೆತಿರುವ ವಿಷಯವನ್ನು ಮತ ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಅಕ್ಷಮ್ಯ ಎಂದರು.