ತುಮಕೂರು ನಗರದ ಸಿದ್ಧಿವಿನಾಯಕ ತರಕಾರಿ ಮತ್ತು ಹೂವು ಮಾರುಕಟ್ಟೆ ಆವರಣದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿತ್ ಪಾರ್ಕಿಂಗ್ ನಿರ್ಮಾಣ ಯೋಜನೆ ವಿರುದ್ಧ ಮಂಗಳವಾರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ನೇತೃತ್ವದಲ್ಲಿ ಸ್ಥಳೀಯ ವ್ಯಾಪಾರಿಗಳು ಮಾರುಕಟ್ಟೆ ಆವರಣದಲ್ಲಿ ಧರಣಿ ನಡೆಸಿದರು.
ಹೋರಾಟದ ಹಿನ್ನೆಲೆಯಲ್ಲಿ ಮಾರುಕಟ್ಟೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಶ್ಚಿಮ ಭಾಗದ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾಕಾರರು ಮಾರುಕಟ್ಟೆ ಆವರಣ ಪ್ರವೇಶಿಸದಂತೆ ಪೊಲೀಸರು ತಡೆಯೊಡ್ಡಿದ್ದರು. ಈ ವೇಳೆ ಧರಣಿ ನಡೆಸಲು ಬಂದ ಶಾಸಕ ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹಾಗೂ ಸ್ಥಳೀಯ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ತಡೆಯೊಡ್ಡಿದ ಪೊಲೀಸರ ವಾಗ್ವಾದ ನಡೆಯಿತು.
ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಸುಮಾರು ನೂರು ಕೋಟಿ ರೂಪಾಯಿ ಮೌಲ್ಯದ ಈ ಮಾರುಕಟ್ಟೆ ಜಾಗವನ್ನು ಸರ್ಕಾರ ಕಿಕ್ ಬ್ಯಾಕ್ ಪಡೆದು ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದೆ. ಇದೊಂದು ದೊಡ್ಡ ಹಗರಣ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಮಾಲ್ ನಿರ್ಮಾಣ ಯೋಜನೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ನಿರ್ಮಾಣ ಮಾಡುವ ಸಂದರ್ಭ ಬಂದರೆ ಹಲವಾರು ವರ್ಷಗಳಿಂದ ಇಲ್ಲಿ ತರಕಾರಿ, ಹೂವಿನ ವ್ಯಾಪಾರ ಮಾಡುತ್ತಿರುವವರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವ ಒಪ್ಪಂದ ಮಾಡಬೇಕು, ಬಡವರಿಗೆ ಅನ್ಯಾಯ ಮಾಡಿ ಶ್ರೀಮಂತ ಉದ್ಯಮಿಗೆ ಸಹಾಯ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಶಾಪ ತಟ್ಟುತ್ತದೆ. ಇಲ್ಲಿರುವ ಗಣಪತಿ ದೇವಸ್ಥಾನವನ್ನು ಮುಟ್ಟಲು ಬಿಡುವುದಿಲ್ಲ, ಇದಕ್ಕೂ ಮೊದಲು ಟೌನ್‌ಹಾಲ್ ಬಳಿ ಸಂಚಾರಕ್ಕೆ ಅಡ್ಡಿಯಾಗಿರುವ ಘೋರಿಯನ್ನು ತೆರವು ಮಾಡಿಸಲಿ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಯೋಜನೆ ರದ್ದು ಮಾಡುವಂತೆ ಈ ಹಿಂದೆಯೇ ಒತ್ತಾಯಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಹಟಕ್ಕೆ ಬಿದ್ದಂತೆ ಜನರ ವಿರೋಧ ಕಡೆಗಣಿಸಿ ಪೊಲೀಸರ ಕಾವಲಿನಲ್ಲಿ ಮಾಲ್ ನಿರ್ಮಾಣಕ್ಕೆ ಹೊರಟಿದೆ. ಯವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ. ಇಲ್ಲಿ ತರಕಾರಿ ಮಾರುಕಟ್ಟೆಯ ಅಗತ್ಯವಿದೆ. ಮಾರುಕಟ್ಟೆಗೆ ಈ ಜಾಗ ಉಳಿಸಿಕೊಂಡು ಹಲವು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಬಡ ವ್ಯಾಪಾರಿಗಳು ತರಕಾರಿ, ಹೂವು, ಹಣ್ಣು ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.