Thursday, June 13, 2024
Google search engine
Homeಮುಖಪುಟಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದ ಜಾತ್ಯತೀತ ಯುವ ವೇದಿಕೆ

ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದ ಜಾತ್ಯತೀತ ಯುವ ವೇದಿಕೆ

ದೇಶದಲ್ಲಿ ಶೇ. 73ರಷ್ಟಿರುವ ಶೂದ್ರ ಸಮುದಾಯ ಶೇ.10 ರಿಂದ 12 ರಷ್ಟಿರುವ ಸಮುದಾಯಗಳು ಹೇಳಿದಂತೆ ಕೇಳುತ್ತಾ ಬದುಕುತ್ತಿದ್ದು, ಬಹುಸಂಖ್ಯಾತ ಸಮುದಾಯದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಅನಿವಾರ್ಯವಾಗಿ ಬೆಂಬಲಿಸಬೇಕಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಬೂದಾಳ್ ತಿಳಿಸಿದ್ದಾರೆ.

ತುಮಕೂರಿನ ಉಪ್ಪಾರಹಳ್ಳಿ ರೈಲ್ವೆ ಓವರ್ ಬ್ರಿಡ್ಜ್ ಬಳಿ ಜಾತ್ಯತೀತ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಅತಿ ಹಿಂದುಳಿದ ಜಾತಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದ ಜನರನ್ನು ಒಂದು ಮಾಂಸಹಾರಿ, ಸಸ್ಯಹಾರಿ ಹೆಸರಿನಲ್ಲಿ ಸಂಪೂರ್ಣವಾಗಿ ವಿಂಗಡಿಸಿದ್ದು, ಶೇ.10-12ರಷ್ಟಿರುವ ಸಸ್ಯಾಹಾರಿಗಳು ಹೇಳಿದಂತೆ ಶೇ73ರಷ್ಟಿರುವ ಮಾಂಸಹಾರಿಗಳು ನಮ್ಮ ಆಚರಣೆ, ಆಚಾರ, ವಿಚಾರಗಳಲ್ಲಿ ಬದಲಾವಣೆ ಮಾಡಿಕೊಂಡು, ನಮ್ಮ ಪೂರ್ವಿಕರ ಆಚರಣೆಗಳನ್ನು ಮೂಲೆಗುಂಪು ಮಾಡಿ ಬದುಕುತ್ತಿದ್ದೇವೆ. ಪ್ರಾಣ ಹೋಗುವ ಸಂದರ್ಭದಲ್ಲಿಯೂ ಬಹುಸಂಖ್ಯಾತರ ಆಚರಣೆಗಳಿಗೆ ಮನ್ನಣೆ ನೀಡದ ಸಸ್ಯಹಾರಿಗಳ ಎಲ್ಲಾ ಆಚರಣೆಗಳನ್ನು ಪ್ರಶ್ನಿಸದೆ ನಾವು ಮೈಗೂಡಿಸಿಕೊಳ್ಳುತ್ತಿದ್ದು,ಇದು ದೊಡ್ಡ ಅಪಾಯದ ಮುನ್ಸೂಚನೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ನಮ್ಮ ಆಸ್ಥಿತ್ವ ಮತ್ತು ಸಾಮಾಜಿಕ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿಯನ್ನು ಸೋಲಿಸುವ ಕೆಲಸ ಮಾಡಬೇಕು. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆಂದರು.

ಉಪನ್ಯಾಸಕ ಹಾಗೂ ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಜಿ.ಕೆ.ನಾಗಣ್ಣ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ದೇಶ ಸರ್ವಾಧಿಕಾರಿ ಆಡಳಿತದತ್ತ ಹೊರಳುತ್ತಿದೆ. ವಿರೋಧ ಪಕ್ಷಗಳನ್ನು ಜೈಲಿನಲ್ಲಿಟ್ಟು, ಪ್ರಶ್ನೆ ಮಾಡದಂತಹ ಆಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ಅತ್ಯಂತ ಬ್ರಹಾಂಡ ಭ್ರಷ್ಟಾಚಾರ ಎಸಗಿದ್ದರೂ ಶಿಕ್ಷೆಯಿಲ್ಲ. ಆದರೆ ತಪ್ಪು ಮಾಡಿದ್ದಾರೋ, ಇಲ್ಲವೋ ಎಂಬ ಬರುವ ಮುಂಚೆಯೇ ದೆಹಲಿ ಸಿ.ಎಂ.ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಇಡಲಾಗಿದೆ. ಇವುಗಳಿಗೆ ಪರಿಹಾರವೆಂದರೆ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ಆಗಿದೆ. ಸಂಪತ್ತಿನ ಸಮಾನ ಹಂಚಿಕೆಯಾಗಲು ಜಾತಿಗಣತಿಯೊಂದೇ ಪರಿಹಾರವಾಗಿದೆ. ಹಾಗಾಗಿ ಜಾತಿ ಗಣತಿಯನ್ನು ಮಾಡುವ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಅತಿ ಹಿಂದುಳಿದ ಜಾತಿಗಳು ಬೆಂಬಲಿಸಬೇಕಾಗಿದೆ ಎಂದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ,ಬಿಜೆಪಿ ಒಂದು ಸುಳ್ಳು ಹೇಳುವ ಪಕ್ಷ. 10 ವರ್ಷಗಳಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ರೈತರ ಅದಾಯ ದುಪ್ಪಟ್ಟು ಮಾಡುತ್ತೇವೆ ಎಂದವರು 450 ರೂ ಇದ್ದ ಡಿಎಪಿ ರಸಗೊಬ್ಬರದ ದರವನ್ನು 1500ಗಳಿಗೆ ಹೆಚ್ಚಳ ಮಾಡಿದ್ದಾರೆ. ಖಾಸಗೀಕರಣದಿಂದ ವಿದ್ಯಾವಂತ ಯುವಜನರಿಗೆ ಉದ್ಯೋಗವೂ ಇಲ್ಲ. ಸಾಮಾಜಿಕ ನ್ಯಾಯವೆಂಬುದು ಮರೀಚಿಕೆಯಾಗಿದೆ. ಹಾಗಾಗಿ ನಮ್ಮ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದರು.

ಹೆಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಆ ಕೃತಜ್ಞತೆ ಅವರಿಗೆ ಇಲ್ಲ. ಬದಲಾಗಿ ಬಿಜೆಪಿಯೊಂದಿಗೆ ಸೇರಿ ಕಾಂಗ್ರೆಸ್ ಪಕ್ಷ ಸೋಲಿಸಲು ಕರೆ ನೀಡುತ್ತಾರೆ. ತಮ್ಮ ಕುಟುಂಬಕೋಸ್ಕರ ಒಕ್ಕಲಿಗರನ್ನು ಬೆಳೆಯಲು ಬಿಟ್ಟಿಲ್ಲ. ವೈ.ಕೆ.ರಾಮಯ್ಯ ಸೇರಿದಂತೆ ಅನೇಕ ಒಕ್ಕಲಿಗ ನಾಯಕರನ್ನು ತುಳಿದರು. 2019ರಲ್ಲಿ ಹಾಲಿ ಎಂ.ಪಿ.ಯಾಗಿದ್ದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ, ಅವರಿಗೆ ಮೋಸ ಮಾಡಿ, ಈಗ ಮತ್ತೊಮ್ಮೆ ಮುದ್ದಹನುಮೇಗೌಡರನ್ನು ಸೋಲಿಸಲು ಕರೆ ನೀಡುತ್ತಿದ್ದಾರೆ. ಗೆಲುವು,ಸೋಲು ಎಂಬುದು ಮತದಾರರ ಕೈಯಲಿದೆ. ತುಮಕೂರು ಜಿಲ್ಲೆಯವರು ಸ್ವಾಭಿಮಾನಿಗಳು, ದೇವೇಗೌಡರನ್ನೇ ಸೋಲಿಸಿ ತಮ್ಮ ಸ್ವಾಭಿಮಾನ ಉಳಿಸಿಕೊಂಡವರು ಎಂದರು.

ವೇದಿಕೆಯಲ್ಲಿ ಉಪನ್ಯಾಸಕರಾದ ಡಾ.ಕೆ.ಪಿ.ನಟರಾಜು, ಪತ್ರಕರ್ತ ಎಸ್.ನಾಗಣ್ಣ, ಜಿ.ವಿ.ಆನಂದಮೂರ್ತಿ, ಡಾ.ಬಸವರಾಜು, ಕಾಂಗ್ರೆಸ್ ಮುಖಂಡರಾದ ಡಾ.ರಫೀಕ್ ಅಹಮದ್, ಇಕ್ಬಾಲ್ ಅಹಮದ್, ಎನ್.ಗೋವಿಂದರಾಜು, ಸುಲ್ತಾನ್ ಮೊಹಮದ್, ಕುಂದೂರು ತಿಮ್ಮಯ್ಯ, ಕಾರ್ಯಕ್ರಮ ಆಯೋಜಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ, ಮಾರುತಿ ಪ್ರಸಾದ್, ಮುರುಳಿ ಕುಂದೂರು, ಮಾರುತಿ, ಶ್ರೀಧರ ಕುಪ್ಪೂರು, ಬಿ.ಆರ್.ಲೋಕೇಶ್‌ಸ್ವಾಮಿ, ಗಂಗಣ್ಣ ಮಾರ್ಕೇಟ್, ಕೆಸ್ತೂರು ಮೂರ್ತಿ, ಮನು ಚಕ್ರವರ್ತಿ, ಜಿ.ಮೋಹನ್‌ಕುಮಾರ್ ಉಪ್ಪಾರಹಳ್ಳಿ, ಟಿ.ಎನ್.ನಿಖಿಲ್‌ರವಿ ಉಪ್ಪಾರಹಳ್ಳಿ, ಭಾಗ್ಯಮ್ಮ ಮಂಚಲದೊರೆ, ಸರಸ್ವತಿ ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments