‘ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶದ ಏಕತೆ, ಸಾರ್ವಭೌಮತ್ವ ಕಾಪಾಡದರು. ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿದರು. ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದು ಜನರ ಮನಸ್ಸಿನಿಂದ ಅವರ ಹೆಸರನ್ನು ಅಳಿಸಲು ಬಿಜೆಪಿ ಮಾಡುತ್ತಿರುವ ವ್ಯರ್ಥ ಪ್ರಯತ್ನ ಈಡೇರುವುದಿಲ್ಲ’ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಬೇಕು’ ಎಂಬ ಬಿಜೆಪಿಯ ಕೆಟ್ಟ ಸಂಪ್ರದಾಯ ಒಳ್ಳೆಯದಲ್ಲ ಎಂದು ಹೇಳಿದರು.
‘ಇಂದಿರಾ ಗಾಂಧಿ ಅವರ ಹೆಸರಿರುವ ಯೋಜನೆಗಳನ್ನು ಬಿಜೆಪಿ ಅವರು ಬದಲಾವಣೆ ಮಾಡಬಹುದು. ಆದರೆ ಇಂದಿರಾ ಗಾಂಧಿ ಅವರ ಕೊಡುಗೆ ಹಾಗೂ ಅವರ ವ್ಯಕ್ತಿತ್ವವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅವರು ದೇಶಕ್ಕೆ ಕೊಟ್ಟ ಅನೇಕ ಕೊಡುಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿ ಸ್ವಾಭಿಮಾನ ಮತ್ತು ನೆಮ್ಮದಿ ಬದುಕಿಗೆ ಕಾರ್ಯಕ್ರಮ, ದೇಶದ ಸಾರ್ವಭೌಮತೆಗೆ ಜೀವ ತ್ಯಾಗ ಮಾಡಿದ ವ್ಯಕ್ತಿತ್ವವನ್ನು ಜನ ಮರೆಯಲು ಸಾಧ್ಯವಿಲ್ಲ ಎಂದರು.
ಸರ್ಕಾರಕ್ಕೆ ಹೆಸರು ಮುಖ್ಯವಲ್ಲ. ಜನರು, ಬಡವರ ಪರವಾಗಿ ಮಾಡುವ ಕಾರ್ಯಕ್ರಮ ಮುಖ್ಯ. ಬಡವರ ಹಸಿವು ನೀಗಿಸಲು ಮಾಡಲಾದ ಇಂದಿರಾ ಕ್ಯಾಂಟೀನ್ ಗೆ ಅನುದಾನ ಬಿಡುಗಡೆ ಮಾಡದೇ ಅದನ್ನು ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಈ ಇಂದಿರಾ ಕ್ಯಾಂಟೀನ್ ಅಗತ್ಯತೆ ಎಲ್ಲರಿಗೂ ಎಷ್ಟು ಮುಖ್ಯವಾಗಿತ್ತು ಎಂಬುದು ಜನರಿಗೆ ತಿಳಿದಿದೆ’ ಎಂದು ಇಂದಿರಾ ಕ್ಯಾಂಟಿನ್ ಅಗತ್ಯತೆಯನ್ನು ಒತ್ತುಹೇಳಿದರು.
‘ಹೈಕೋರ್ಟ್ ನಿರ್ದೇಶನದ ನಂತರ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಆರಂಭಿಸಿದಿರಿ. ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಆಹಾರ ಸಚಿವನಾಗಿದ್ದಾಗ ತಮಿಳುನಾಡಿಗೆ ಹೋಗಿ ಅಮ್ಮಾ ಕ್ಯಾಂಟೀನ್ ಅಧ್ಯಯನ ಮಾಡಿದೆ. ಅಲ್ಲಿ ಶುಚಿತ್ವ, ಉತ್ತಮ ಗುಣಮಟ್ಟದ ಆಹಾರ, ಬಡವರು ಮಾತ್ರವಲ್ಲ ಶಅರೀಮಂತರೂ ಅಲ್ಲಿಗೆ ಬರುವಂತೆ ಇರಬೇಕು ಎಂದು ಇಂದಿರಾ ಕ್ಯಾಂಟೀನ್ ಆರಂಭಿಸಿದೆವು. ನಮ್ಮ ಉದ್ದೇಶ ಬಡವರ ಹಸಿವು ನೀಗಿಸುವುದು. ರಾಜ್ಯದಲ್ಲಿ ಯಾರೂ ಹಸಿವಿನಿಂದ ನರಳಬಾರದು ಎಂಬುದಾಗಿತ್ತು’ ಎಂದು ವಿವರಿಸಿದರು.
‘ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕರು, ಚಾಲಕರು, ಬಸ್ ಕಂಡಕ್ಟರ್ ಗಳು ಬೆಳಗ್ಗೆ ತಿಂದರೆ ಮತ್ತೆ ಸಂಜೆ ಮನೆಗೆ ಹೋದಾಗ ತಿನ್ನುವ ಪರಿಸ್ಥಿತಿ ಇತ್ತು. ಮಧ್ಯಾಹ್ನ ಹೊರಗೆ ಊಟ ಮಾಡಲು ಹೋದರೆ 150 ರೂ. ಖರ್ಚು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕಾಲೇಜಿಗೆ ಹೋಗುತ್ತಿದ್ದ ಬಡ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಮಾಡುತ್ತಿರಲಿಲ್ಲ. ಈ ಕಾರಣಕ್ಕೆ ಈ ಯೋಜನೆ ಜಾರಿಗೆ ತರಲಾಯಿತು.
ಇಂದಿರಾ ಗಾಂಧಿ ಹೆಸರು ಯಾಕೆ ಸೂಕ್ತ ಎಂದರೆ, ಪಡಿತರ ಚೀಟಿ ಹಾಗೂ ನ್ಯಾಯಬೆಲೆ ಅಂಗಡಿ ವ್ಯವಸ್ಥೆಯನ್ನು ಇಂದಿರಾ ಗಾಂಧಿ ಜಾರಿಗೆ ತಂದು ದೇಶದಲ್ಲಿ ಆಹಾರ ಇಲ್ಲದೆ ಜನ ಹಸಿವಿನಿಂದ ಜೀವಿಸಬಾರದು ಎಂದು ಸರ್ಕಾರವೇ ದೇಶದುದ್ದಗಲಕ್ಕೆ ಈ ಯೋಜನೆ ಮೂಲಕ ಆಹಾರ ನೀಡಲು ಆರಂಭಿಸಿದ್ದರು. ಇಂತಹ ಪಡಿತರ ಚೀಟಿಯನ್ನು ಕೊಡುವ ಯೋಗ್ಯತೆ ಬಿಜೆಪಿ ಸರ್ಕಾರಕ್ಕಿಲ್ಲ. ಪಡಿತರ ಚೀಟಿ ಕೊಡುವುದನ್ನು ಸರ್ಕಾರ ನಿಲ್ಲಿಸಿದೆ. ಬಡವವರ ಆಹಾರ ಕಡಿತಗೊಳಿಸಿದೆ. ಇಂತಹ ಸರ್ಕಾರ ಅವರ ಹೆಸರನ್ನು ಬದಲಿಸಲು ಮುಂದಾಗಿದೆ ಎಂದು ಟೀಕಿಸಿದರು.
‘ಖಲಿಸ್ಥಾನ ಮಾಡುವ ಪಾಕಿಸ್ತಾನದ ಕುತಂತ್ರ ಮೆಟ್ಟಿ ನಿಂತಿದ್ದಕ್ಕೆ ಬಲಿಯಾದ ಇಂದಿರಾ ಗಾಂಧಿ ಅವರ ರಕ್ತ ಈ ದೇಶದ ಮಣ್ಣಲ್ಲಿ ಬೆರೆತಿದೆ. ಇನ್ನು ದಕ್ಷಿಣ ಭಾರತದಲ್ಲಿ ಶ್ರೀಲಂಕಾದ ಎಲ್ ಟಿಟಿ ದಾಳಿಗೆ ಬಲಿಯಾದ ರಾಜೀವ್ ಗಾಂಧಿ ಅವರ ರಕ್ತ ಮಣ್ಣಲ್ಲಿ ಬೆರೆತಿದೆ. ಹೀಗಾಗಿ ಗಾಂಧಿ ಕುಟುಂಬವನ್ನು ಜನರಿಂದ ದೂರ ಮಾಡಲು ಸಾಧ್ಯವಿಲ್ಲ. ಅವರ ಹೆಸರಿನ ಯೋಜನೆಗಳ ಮರುನಾಮಕರಣ ಅವರಿಗೆ ಮಾಡುವ ಅಗೌರವವಾಗಿದೆ’ ಎಂದರು.
‘ಸಿ.ಟಿ ರವಿ ಮೇಕೆದಾಟು ವಿಚಾರವಾಗಿ ಯಾಕೆ ಮಾತನಾಡುತ್ತಿಲ್ಲ? ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಧರಣಿ ಕೂತಿದ್ದಾರೆ. ಆದರೂ ರಾಜ್ಯದ ಶಾಸಕರಾಗಿ, ಕನ್ನಡಿಗರ ಪರವಾಗಿ ಸಿ.ಟಿ ರವಿ ಅವರು ಯಾಕೆ ನಿಲ್ಲಲಿಲ್ಲ? ಬಿಜೆಪಿಯವರು ರಾಜ್ಯದ ಜನರ ಬಗ್ಗೆ ಬದ್ಧತೆ ಇದ್ದರೆ ಅವರು ತಮ್ಮ ರಾಜ್ಯಾಧ್ಯಕ್ಷರಿಗೆ ಸಂದೇಶ ಕೊಟ್ಟು ಮೇಕೆದಾಟು ಯೋಜನೆ ಆರಂಭಿಸಲು ಅವಕಾಶ ನೀಡುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.