ಸರ್ಕಾರ ಮತ್ತು ಸರ್ಕಾರ ಸ್ವಾಮ್ಯದ ಸಂಸ್ಥೆಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಇನ್ನು ಮುಂದೆ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಸೇರಿದಂತೆ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಈ ನಿರ್ದೇಶನವನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಸೂಚಿಸುವಂತೆ ಸರ್ಕಾರದ ಸುತ್ತೋಲೆಯಲ್ಲಿ ಮುಖ್ಯಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟರ್ ಖಾತೆಯಲ್ಲಿ ಸರ್ಕಾರದ ಸುತ್ತೋಲೆಯನ್ನು ಹಂಚಿಕೆ ಮಾಡಿಕೊಂಡಿದ್ದು ಹಾರ ತುರಾಯಿ ಬದಲು ಪುಸ್ತಕವನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಸಚಿವ ಸುನಿಲ್ ಕುಮಾರ್ ಅವರು ಸಮಾರಂಭವೊಂದರಲ್ಲಿ ಇನ್ನು ಮುಂದೆ ನನಗೆ ಸಮಾರಂಭದಲ್ಲಿ ಹಾರ ತುರಾಯಿ ನೀಡುವ ಬದಲು ಕನ್ನಡ ಪುಸ್ತಕವನ್ನು ಕೊಡಿ. ಅದನ್ನು ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಸುನಿಲ್ ಕುಮಾರ್ ಅವರ ಅಭಿಪ್ರಾಯವನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿದೆ.
ಅನಗತ್ಯ ವೆಚ್ಚವನ್ನು ತಪ್ಪಿಸಲು ಇನ್ನು ಆ ಸಂಪ್ರದಾಯ ಬೇಡ ಎಂದು ಸೂಚಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.