ದೇಶದ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದ ಬ್ರಿಟಿಷರ ವಿರುದ್ದ ಮಹಾತ್ಮ ಗಾಂಧಿ ಚಲೋಜಾವ್ ಚಳವಳಿ ಆರಂಭಿಸಿದ ರೀತಿಯಲ್ಲೇ ನಾವು ಇಂದು ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರಗಳ ವಿರುದ್ದ ಅಧಿಕಾರ ಬಿಟ್ಟು ತೊಲಗಿ ಎಂದು ಹೋರಾಟ ಆರಂಭಿಸಲಾಗಿದೆ ಎಂದು ಹೋರಾಟಗಾರ್ತಿ ಜೋತಿ ಆನಂತಸುಬ್ಬರಾವ್ ತಿಳಿಸಿದರು.
ತುಮಕೂರು ಮಲ್ಲಸಂದ್ರದ ಗಾಂಧಿಭವನದಲ್ಲಿ ಸಿಪಿಐ ಹಾಗೂ ಎಐಟಿಯುಸಿ ಹಮ್ಮಿಕೊಂಡಿದ್ದ ಜನವಿರೋಧಿ, ಜೀವವಿರೋಧ ಸರಕಾರಗಳು ಅಧಿಕಾರದಿಂದ ತೊಲಗಸಿ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂದು ಭಾರತ ವಿರೋಧಿ ನಿಲುವು ತಾಳಿದ್ದ ಬ್ರಿಟಿಷರ ವಿರುದ್ದ ಇಡೀ ದೇಶದಾದ್ಯಂತ ಮಾಡಿ ಇಲ್ಲವೇ ಮಡಿ ಹೋರಾಟ ಆರಂಭವಾಗಿತ್ತು. ಆದರ ಭಾಗವಾಗಿ ಇಡೀ ದೇಶದ ಜನರು ಸ್ವಾತಂತ್ರ ಪಡೆಯುವಂತಾಯಿತು. ಈಗಲೂ ದೇಶದ ದುಡಿವ ಜನರಿಗೆ ಮಾರಕವಾಗಿರುವ ಇಂತಹ ಸರಕಾರಗಳ ವಿರುದ್ದ ಚಲೇ ಜಾವ್ ಚಳವಳಿ ರೀತಿಯ ಹೋರಾಟ ಆರಂಭಗೊಂಡಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಕೃಷಿ ಅದಾಯ ದುಪ್ಪಟ್ಟು, ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿತು. ಜನರು ಇದಕ್ಕೆ ಮರುಳಾಗಿ ಅಧಿಕಾರ ನೀಡಿದರು. ಆದರೆ 7 ವರ್ಷಗಳಾದರೂ ನೀಡಿದ ಭರವಸೆ ಈಡೇರಿಸಲಿಲ್ಲ.
ಬದಲಿಗೆ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಲಕ್ಷಾಂತರ ಕಂಪನಿಗಳು ಬಾಗಿಲು ಮುಚ್ಚಿವೆ. ಅಡುಗೆ ಎಣ್ಣೆ, ಅಕ್ಕಿ, ಸಕ್ಕರೆ ಬೆಲೆ ಗಗನಕ್ಕೇರಿದೆ. ರಸಗೊಬ್ಬರ, ಬೀಜ ಮತ್ತಿತರ ಕೃಷಿ ಪೂರಕ ವಸ್ತುಗಳ ಬೆಲೆ ಹೆಚ್ಚಳದಿಂದ ರೈತರು ನಲುಗಿ ಹೋಗಿದ್ದಾರೆ. ಜನರ ಕಷ್ಟ ಅರ್ಥ ಮಾಡಿಕೊಳ್ಳದ ಸರಕಾರಗಳನ್ನು ಅಧಿಕಾರದಿಂದ ತೊಲಗಿಸಬೇಕು ಎಂದು ಸಲಹೆ ನೀಡಿದರು.
ಕಳೆದ ಎಳು ವರ್ಷಗಳಲ್ಲಿ ಭಾರತದಲ್ಲಿ ಕೋಮುಗಲಭೆಗಳು ಹೆಚ್ಚಾಗಿವೆ. ಅಲ್ಪಸಂಖ್ಯಾತರು, ದಲಿತರು ಭಯದಲ್ಲಿ ಬದುಕುವಂತಾಗಿದೆ. ಆಹಾರದಲ್ಲಿಯೂ ತಾರತಮ್ಯ ನೀತಿ, ಗೋಮಾಂಸ ನಿಷೇಧ ಕಾಯ್ದೆ ಹೀಗೆ ಹಲವು ಕಾಯ್ದೆಗಳು ಜನರಿಗೆ ಮಾರಕವಾಗಿದೆ. ಇವುಗಳ ವಿರುದ್ದ ಜನರು ದ್ವನಿ ಎತ್ತಬೇಕಾಗಿದೆ. ಭ್ರಷ್ಟ ಸರಕಾರಗಳನ್ನು ಅಧಿಕಾರದಿಂದ ತೊಲಗಿಸಲು ಜನಾಂದೋಲನ ಅಭಿಯಾನ ಆರಂಭಿಸಲಾಗಿದೆ ಎಂದರು.