ಜನರ ಭಾವನೆ ಹಾಗೂ ಧ್ವನಿಯನ್ನು ಗ್ರಹಿಸಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೊವಿಡ್ ಬಗ್ಗೆ ನಾವು ಯಾರೂ ಯೋಚಿಸಿರಲಿಲ್ಲ. ಅದರ ಅನುಭವದ ಆಧಾರದ ಮೇಲೆ ಈ ಪ್ರಣಾಳಿಕೆ ಮಾಡಿದ್ದೇವೆ ಎಂದು ಹೇಳಿದರು.
ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರಿಗೇ ಈಗಾಗಲೇ ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಒಂದು ಸಾವಿರ ಕೃಷಿ ಉತ್ಪಾದನಾ ಕೇಂದ್ರಗಳನ್ನು ತೆರೆಯುವುದು, ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಸಂಕಲ್ಪ, ಸಿರಿ ಧಾನ್ಯಕ್ಕೆ ಅತಿ ಹೆಚ್ಚು ಒತ್ತುಕೊಡುವ ಕೆಲಸ ಮಾಡಲಾಗಿದೆ ಎಂದರು.
ನಗರ ಪ್ರದೇಶದಲ್ಲಿ 5 ಲಕ್ಷ ಮನೆ, ಗ್ರಾಮೀಣ ಪ್ರದೇಶಗಳಲ್ಲಿ 10 ಲಕ್ಷ ಮನೆ ನಿರ್ಮಾಣ ಪ್ರತಿ ಮನೆ ನಿರ್ಮಾಣ 5 ಲಕ್ಷ ರೂ. ನೀಡಲಾಗುವುದು. ಪಡಿತರದಲ್ಲಿ ಅಕ್ಕಿಯ ಜೊತೆಗೆ ಐದು ಕೆಜಿ ಸಿರಿ ಧಾನ್ಯ ನೀಡಲಾಗುವುದು. ಅರ್ಧ ಲೀಟರ್ ಹಾಲು ಕೊಡಲಾಗುವುದು. ಬಿಪಿಎಲ್ ಕಾರ್ಡುದಾರರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿ 10 ಲಕ್ಷ ರೂ ವಿಮೆ ನೀಡಲಾಗುವುದು. ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಭರವಸೆ ನೀಡಿದರು.
ಕರ್ನಾಟಕವನ್ನು ಶಕ್ತಿಶಾಲಿ ರಾಜ್ಯವಾಗಿಸುವ ಗುರಿ ನಮ್ಮದು. ಪ್ರಧಾನಮಂತ್ರಿಯ ಐದು ಟ್ರಿಲಿಯನ್ ಡಾಲರ್ ಎಕಾನಮಿಯ ಗುರಿ ಮುಟ್ಟಲು ಐಟಿ ಬಿಟಿ, ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದು ಜನರ ಜನಪರ ಪ್ರಣಾಳಿಕೆ ಇದಕ್ಕೆ ಕರ್ನಾಟಕದ ಜನರು ಗಮನಿಸಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.