ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿಕೊಳ್ಳಲಾಗಿದೆ ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ.ಶಿವಣ್ಣ ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕಾದರೆ ದೇಶದಲ್ಲಿ ಕಾರ್ಮಿಕ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕಾರ್ಮಿಕರೆಲ್ಲರೂ ಒಂದಾಗಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳು ಮತ್ತು ಕಾರ್ಪೋರೇಟ್ ನೀತಿಗಳನ್ನು ಜಾರಿಗೊಳಿಸುತ್ತಿರುವುದರಿಂದ ಕಾರ್ಮಿಕರು ಒಗ್ಗೂಡಬೇಕಾಗಿದೆ. ಬೆಲೆ ಏರಿಕೆ ವಿರುದ್ಧ ತೀವ್ರ ಸ್ವರೂಪದ ಹೋರಾಟ ಬರಬೇಕಾಗಿದೆ ಎಂದು ಹೇಳಿದರು.
ಪಾವಗಡದಲ್ಲಿ ನಿರುದ್ಯೋಗ ಪ್ರಮಾಣ ದೊಡ್ಡದಾಗಿದೆ:
ಪಾವಗಡ ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡ ಪ್ರಮಾಣದಲ್ಲಿದೆ. ತಾಲೂಕಿನ ಗ್ರಾಮಾಂತರ ಪ್ರದೇಶದ ನೂರಾರು ಮಂದಿ ರಾಜ್ಯದ ಹೊರ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ. ಅಧಿಕಾರಕ್ಕೆ ಬಂದ ಯಾವ ಪಕ್ಷದ ಶಾಸಕರೂ ತಾಲೂಕಿನಲ್ಲಿ ಕಾರ್ಖಾನೆಗಳ ನಿರ್ಮಾಣಕ್ಕೆ ಪ್ರಯತ್ನ ಮಾಡಲಿಲ್ಲ. ಉದ್ಯೋಗವನ್ನು ನೀಡಲು ಮುಂದಾಗಲಿಲ್ಲ ಎಂದು ಆರೋಪಿಸಿದರು.
ಕಾರ್ಖಾನೆಗಳನ್ನು ನಿರ್ಮಾಣ ಮಾಡಿದರೆ ನೂರಾರು ಯುವಕ-ಯುವತಿಯರಿಗೆ ಉದ್ಯೋಗಗಳು ಸಿಗುತ್ತವೆ. ಇದರಿಂದ ಕುಟುಂಬಗಳು ಆರ್ಥಿಕವಾಗಿ ಶಕ್ತಿಯುತವಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ಸ್ಥಳೀಯ ಕಾರ್ಮಿಕ ಮುಖಂಡರು ಹಾಜರಿದ್ದರು.