Friday, September 20, 2024
Google search engine
Homeಮುಖಪುಟಸರಳ, ಸ್ಪಷ್ಟವಾದ ಅರಸು ಕುರನ್ಗರಾಯ ಸಂಶೋಧನಾ ಕೃತಿ

ಸರಳ, ಸ್ಪಷ್ಟವಾದ ಅರಸು ಕುರನ್ಗರಾಯ ಸಂಶೋಧನಾ ಕೃತಿ

ಡಾ.ರವಿಕುಮಾರ್ ನೀಹ ಬರೆದಿರುವ ಅರಸು ಕುರನ್ಗರಾಯ ಸಂಶೋಧನಾ ಕೃತಿ ಸ್ಪಷ್ಟ ಮತ್ತು ಸರಳ ಬರೆಹದಿಂದ ಕೂಡಿದೆ. ಹಾಗೆ ನೋಡಿದರೆ ಸಂಶೋಧನಾ ಕೃತಿಗಳು ಓದಿಸಿಕೊಂಡು ಹೋಗುವುದು ಕಷ್ಟ. ಅಂಥಾದ್ದರಲ್ಲಿ ಸೃಜನೇತರವಾದ ಸಂಶೋಧನ ಕೃತಿ ಸೃಜನಶೀಲ ಬರೆಹದಂತೆಯೇ ನಿರರ್ಗಳ ಓದಿಸಿಕೊಂಡು ಹೋಗುತ್ತದೆ. ಬೂದುಗವಿಯ(ಸಿದ್ದರಬೆಟ್ಟದ) ದಕ್ಷಿಣ ಭಾಗದಲ್ಲಿ ಯಾರ ಗಮನಕ್ಕೂ ಬಾರದೆ ಅಸ್ತಿತ್ವದಲ್ಲಿದ್ದ ಕರುನ್ಗರಾಯನ ಪಾಳ್ಯಕಟ್ಟು ಹಲವು ಕೋನಗಳಿಂದ ಗಮನ ಸೆಳೆಯುವ ಕೃತಿಯಾಗಿದೆ.

ಕುರನ್ಗರಾಯ ಯುದ್ದದಾಹಿಯಲ್ಲ, ಪ್ರಜೆಗಳ ಹಿಂಸಾಪೀಡಕನೂ ಅಲ್ಲ ಎಂಬುದು ಇಡೀ ಕೃತಿ ಉದ್ದಕ್ಕೂ ಕಂಡುಬರುತ್ತದೆ. ಮಧುಗಿರಿ ಮಹಾ ನಾಡಪ್ರಭು ಚಿಕ್ಕಪ್ಪಗೌಡನ ಕಾಲದಲ್ಲಿ ಸಣ್ಣ ಪಾಳ್ಯಕಟ್ಟನ್ನು ಕಟ್ಟಿಕೊಂಡು ಆಳ್ವಿಕೆ ಮಾಡಿಕೊಂಡಿದ್ದ ಕುರನ್ಗರಾಯ ಜನೋಪಯೋಗಿ ಕಲ್ಯಾಣ ಕೆಲಸಗಳನ್ನು ಮಾಡುತ್ತಾ ಜನರ ಮನಸ್ಸನ್ನು ಸೂರೆಗೊಂಡಿದ್ದ ಎಂಬುದು ಈ ಕೃತಿಯಿಂದ ತಿಳಿದುಬರುತ್ತದೆ. ಇಂತಹ ಜನೋಪಕಾರಿ ಸಾಂಸ್ಕೃತಿಕ ರಾಯಭಾರಿ ಅರಸನ ಬಗ್ಗೆ ಯಾವ ಇತಿಹಾಸಕಾರರೂ ದಾಖಲು ಮಾಡಿಲ್ಲ ಎಂಬುದರ ಬಗ್ಗೆ ಲೇಖಕರು ಗಮನ ಸೆಳೆಯುತ್ತಾರೆ.

ಕುರನ್ಗರಾಯ ತನ್ನ ಪಾಳ್ಯಕಟ್ಟನ್ನು ವಿಸ್ತರಿಸುವುದಾಗಲೀ, ಪಕ್ಕದ ಪಾಳ್ಯೆಕಟ್ಟುಗಳ ಮೇಲೆ ಯುದ್ದ ಮಾಡುವುದಾಗ ಮಾಡಿಲ್ಲ ಎಂಬುದು ಕೃತಿ ಉದ್ದಕ್ಕೂ ಗಮನ ಸೆಳೆಯುವ ಸಂಗತಿಯಾಗಿದೆ. ಕುರನ್ಗರಾಯ ಒಂದು ಸಣ್ಣ ಪಾಳ್ಯಕಟ್ಟನ್ನು ಆಳ್ವಿಕೆ ಮಾಡಿದ್ದ ಎಂಬುದಕ್ಕೆ ಹಲವು ಕೃತಿಗಳಲ್ಲಿ ದಾಖಲಿಸಿರುವ ಮಾಹಿತಿಗಳನ್ನು ಸಂಗ್ರಹಿಸುವ ಮೂಲಕ ಓದುಗರಿಗೆ ಕುರನ್ಗರಾಯನ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಕಟ್ಟಿಕೊಡುವ ಪ್ರಯತ್ನವನ್ನ ಕೃತಿಕಾರರು ಮಾಡಿರುವುದು ಮೆಚ್ಚತಕ್ಕ ಸಂಗತಿ.

ಮಾದಿಗ ಸಮುದಾಯದ (ಎಡಗೈ ಪಣಕಟ್ಟು) ಅರಸು ಕುರನ್ಗರಾಯ ಇದ್ದ ಕಾಲವನ್ನು ನಿರ್ಣಯಿಸುವಾಗ ಕೃತಿಕಾರರು ಸಾಕಷ್ಟು ಕಸರತ್ತಿಗೆ ಇಳಿದಿರುವುದು ಕಂಡುಬರುತ್ತದೆ. ಕುರನ್ಗರಾಯನ ಕುರಿತು ಬಂದಿರುವ ಎಲ್ಲಾ ಬರಹಗಳ ಮೇಲೂ ಕಣ್ಣಾಡಿಸಿರುವುದು ಗೋಚರಿಸುತ್ತದೆ. ಕೊರಟಗೆರೆ ಮೂಲದ ಸಿದ್ದಪ್ಪ ಹೊರತಂದಿರುವ ಸಿದ್ದರಬೆಟ್ಟದ ಕೃತಿಯಿಂದ ಹಿಡಿದು ಇತ್ತೀಚಿನ ಎಲ್ಲಾ ಬರಹಗಳನ್ನು ಮುಂದಿಟ್ಟುಕೊಂಡು ಕುರನ್ಗರಾಯನ ಬಗ್ಗೆ ಸ್ಪಷ್ಟ ಚಿತ್ರಣವನ್ನು ಓದುಗರ ಮುಂದಿಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಎಡಗೈ ಸಮುದಾಯದ ಕುರನ್ಗರಾಯ ಪಾಳ್ಯಕಟ್ಟನ್ನು ಕಟ್ಟಿಕೊಂಡು ಆಳ್ವಿಕೆ ಮಾಡಿದ್ದ ಎಂಬುದನ್ನು ಸಮರ್ಥಿಸಲು ಇತಿಹಾಸದ ದಾಖಲೆಗಳು, ಶಾಸನಗಳು, ಬೇರೆಬೇರೆಯವರು ಬರೆದಿರುವ ಬರಹೆಗಳು, ಐತಿಷ್ಯಗಳು, ಜಾನಪದ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಂಡಿರುವುದು ಈ ಕೃತಿಯಲ್ಲಿನ ಸಮರ್ಥನೆಗಳಿಂದ ತಿಳಿದುಬರುತ್ತದೆ.

ಪ್ರತಿ ಹತ್ತು ವರ್ಷಕ್ಕೊಮ್ಮೆ ಪ್ರಕಟವಾಗಿರುವ ಬರಹಗಳು ಕುರನ್ಗರಾಯನ ಕುರಿತು ಅಲ್ಪಸ್ವಲ್ಪ ಮಾಹಿತಿಯನ್ನು ನೀಡುತ್ತದೆ. ಸಿದ್ದಪ್ಪ, ಡಾ.ಓ ನಾಗರಾಜು, ಬಿ.ರಂ.ಜಗದೀಶ್, ಪು.ಮು.ಗಂಗಾಧರಯ್ಯ, ಡಾ.ರಹಮತ್ ತರೀಕೆರೆ, ವೀಚಿ, ಸಿದ್ದಗಂಗಯ್ಯ ಹೊಲೆತಾಳು ಹೀಗೆ ಹಲವರ ಕೃತಿಗಳನ್ನು ಸಾದ್ಯಂತವಾಗಿ ಅಧ್ಯಯನ ಮಾಡಿ ಮಾಹಿತಿ ನೀಡುವ, ವಿಶ್ಲೇಷಣೆ ಮತ್ತು ವಿಮರ್ಶೆಗೆ ಒಡ್ಡುವ ಡಾ. ರವಿಕುಮಾರ್ ನೀಹ ಅವರ ಕೆಲಸವನ್ನು ಮೆಚ್ದಬೇಕಾದದ್ದೇ. ಸಂಶೋಧಕನೊಬ್ಬ ಒಂದು ಪಾಳ್ಯಕಟ್ಟು ಬಗ್ಗೆ ಸಂಶೋಧನೆ ನಡೆಸುವಾಗ ಬರುವ ಎಲ್ಲಾ ರೀತಿಯ ಎಡರುತೊಡರುಗಳನ್ನು ನಿವಾಸಿಕೊಂಡು ಓದುಗನಿಗೆ ಸರಳವಾದ ಭಾಷೆಯಲ್ಲಿ ಸ್ಪಷ್ಟತೆ, ಖಚಿತತೆ ಮತ್ತು ಊಹಾತ್ಮಕತೆಯನ್ನು ಕಟ್ಟಿಕೊಟ್ಟು ಓದುಗರು ಒಂದು ತೀರ್ಮಾನಕ್ಕೆ ಬರುವಂತೆ ಮಾಡುವುದು ಸಂಶೋಧಕನ ಕೆಲಸ. ಈ ಕೆಲಸವನ್ನು ರವಿಕುಮಾರ್ ನೀಹ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಅರಸು ಕುರನ್ಗರಾಯ ಕೃತಿ ಕುರನ್ಗರಾಯ ಮಾಡಿರುವ ಕೆಲಸಗಳಿಗೆ ಹೆಚ್ಚು ಒತ್ತು ಕೊಟ್ಟಂತೆ ಇದೆ. ಇದು ಸಹಜವೂ ಹೌದು. ಯಾಕೆಂದರೆ ಕುರನ್ಗರಾಯ ದಲಿತ ದೊರೆ. ಆತನ ಬಗ್ಗೆ ಮಸುಕಾಗಿರುವ ಬರಹಗಳು ಬಂದಿವೆಯಾದರೂ ಇಂತಹದ್ದೊಂದು ವಿಶ್ಲೇಷಣಾತ್ಮಕವಾದ ಬರೆಹ ಬಂದಿಲ್ಲ. ಈ ಭಾಗದಲ್ಲಿ ಓಡಾಡಿದ ಇತಿಹಾಸಕಾರರು ಕುರನ್ಗರಾಯನ ಕುರಿತು ಏನನ್ನೂ ಹೇಳಿಲ್ಲ ಎಂಬ ಬಗ್ಗೆ ಕೃತಿಯಲ್ಲಿ ಗಮನ ಸೆಳೆಯ ಲಾಗಿದೆ. ಕುರಂಗರಾಯ ಆಳ್ವಿಕೆ ನಡೆಸುತ್ತಿದ್ದ ಪಾಳ್ಯಕಟ್ಟಿನಲ್ಲಿ ಮಾದಿಗರು, ನಾಯಕರು, ಕಾಡುಗೊಲ್ಲರ ಸಂಖ್ಯೆಯೇ ಹೆಚ್ಚಿದೆ. ಅವುಗಳ ನಡುವೆ ಅಂತರ್ ಸಂಬಂಧ ಇದೆ. ಪ್ರತಿಯೊಂದು ಕೆಲಸದಲ್ಲೂ ಈ ಮೂರು ಸಮುದಾಯಗಳ ಹಂಚುಣ್ಣುವ ಮತ್ತು ಹಂಚಿಕೊಂಡು ಕೆಲಸ ಮಾಡುತ್ತಾ, ಸಮನ್ವಯದಿಂದ ಬದುಕುವುದನ್ನು ಕೃತಿ ಕಟ್ಟಿಕೊಡುತ್ತದೆ. ಗಲ್ಲೆಬಾನೆ, ದೊಡ್ಡಮ್ಮ, ದೊಡ್ಡಕಾಯಪ್ಪ ದೇವಾಲಯಗಳ ನಿರ್ಮಾಣ, ಚರ್ಮದ ಕಾಸು ಜಾರಿಯಲ್ಲಿದ್ದುದು, ಉಡದ ರಥದ ಮೂಲಕ ಕನ್ನೇರಮ್ಮಳನ್ನು ಭೇಟಿಯಾಗಿ ಸರಸವಾಡುತ್ತಿದ್ದು ಕುರುಹುಗಳು ಇವೆ. ಆದರೆ ದೊಡ್ಡಮ್ಮ ಶಾಕ್ತಪಂಥವಳಾಗಿದ್ದರೂ ನಂತರ ಆ ದೇವತೆಯನ್ನು ಸಾಂಸ್ಕೃತೀಕರಣಕ್ಕೆ ಒಳಪಡಿಸಿ ವೀರಶೈವೀಕರಣಗೊಳಿಸಲಾಗಿದೆ. ಈ ಮೂಲಕ ದಲಿತ ರಾಜನ ಇತಿಹಾಸವನ್ನು ತಿರುಚುವ ಮತ್ತು ನಾಯಕರು, ಗೊಲ್ಲರು ಮತ್ತು ಮಾದಿಗರ ನಡುವೆ ಇದ್ದ ಬಾಂಧವ್ಯವನ್ನು ಕುಸಿಯುವಂತೆ ಮಾಡಿರುವ ಪ್ರಯತ್ನಗಳು ನಡೆದಿರುವ ಬಗ್ಗೆ ಕೃತಿಕಾರರು ಬೊಟ್ಟು ಮಾಡುತ್ತಾರೆ.

ಕುರಂಕೋಟೆ, ಚನ್ನರಾಯನದುರ್ಗ, ಗುಪ್ಪಟ್ಣ(ಬುಕ್ಕಾಪಟ್ಟಣ) ಬೂದುಗವಿ ಹೀಗೆ ಇವುಗಳ ಸ್ಥಳನಾಮಗಳ ಬಗ್ಗೆಯೂ ಈ ಕೃತಿಯಲ್ಲಿ ವಿವರಗಳು ಇವೆ. ಬೂದುಗವಿಯಲ್ಲಿ ಗೊಲ್ಲ ಸಮುದಾಯದ ಸಿದ್ದಪ್ಪ ಎಂಬಾತ ತಪಸ್ಸು ಮಾಡಿದ ಕಾರಣಕ್ಕೆ ಸಿದ್ದರಬೆಟ್ಟವಾಗಿ ಪರಿವರ್ತನೆ ಮಾಡಲಾಗಿದೆ. ಅಷ್ಟೇ ಅಲ್ಲ, ಬೂದುಗವಿಗೆ ಬಂದು ಮಾಟ ಮಂತ್ರಗಳನ್ನು ಮಾಡುತ್ತ ಜನರಿಗೆ ಕಿರುಕುಳ ನೀಡುತ್ತಿದ್ದ ಕೈವಾರ ತಾತಯ್ಯನನ್ನು ಅಲ್ಲಿಂದ ಓಡಿಹೋಗುವಂತೆ ಮಾಡುವುದು ಈ ಸಿದ್ದಪ್ಪನೇ ಆಗಿದ್ದು ಇದು ಹೊಸ ಶೋಧವಾಗಿದೆ. ಜತೆಗೆ ಕುರಂಕೋಟೆಯಲ್ಲಿ ಶಾಸನವನ್ನು ಶೋಧಿಸಿದ್ದು ಅದರಿಂದಲೂ ಕುರನ್ಗರಾಯನ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಬುದು. ಇದು ಮತ್ತಷ್ಟು ಅಧ್ಯಯನಕ್ಕೆ ಪೂರಕವಾಗಲಿದೆ ಎಂದು ರವಿಕುಮಾರ್ ಹೇಳಿರುವುದು ಹೆಮ್ಮೆಯ ಸಂಗತಿ.

ಈ ಕೃತಿಯಲ್ಲಿ ಕುರನ್ಗರಾಯನ ಅಸ್ತಿತ್ವದ ಹುಡುಕಾಟದ ಜೊತೆಗೆ ಬೇರೆ ಸಂಗತಿಗಳನ್ನು ವಿಶ್ಲೇಷಣೆಗೆ ಒಳಗು ಮಾಡಿರುವುದು ಕಂಡು ಬರುತ್ತದೆ. ಸಾಂಸ್ಕೃತಿಕ ಇತಿಹಾಸ, ಚರಿತ್ರೆ, ಐತಿಹ್ಯ, ಜಾನಪದ ನುಡಿಕಾರರಿಂದ ಪಡೆದ ಮಾಹಿತಿ ಹೀಗೆ ಎಲ್ಲವನ್ನೂ ಬಳಸಿಕೊಂಡು ರವಿಕುಮಾರ್ ನೀಹ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ಇದಂ ಮಿತಂ ಎನ್ನದ ಮುಂದೆ ಅಧ್ಯಯನಕ್ಕೆ ಈ ಬರೆಹ ಸಣ್ಣ ಮಾರ್ಗವನ್ನು ತೋರಿಸಬಹುದು ಎಂಬುದು ಕೃತಿಕಾರರ ಮೆಚ್ಚತಕ್ಕ ಅಭಿಪ್ರಾಯ.

ಕೆ.ಈ.ಸಿದ್ದಯ್ಯ, ತುಮಕೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular