ಶೂದ್ರಧರ್ಮವು ಜಾತಿ, ಧರ್ಮ ಮತ್ತು ಜನಾಂಗಗಳ ನಡುವೆ ದ್ವೇಷವನ್ನು ಬಿತ್ತುವುದಿಲ್ಲ. ನಮ್ಮ ಧರ್ಮ ಎಂದೂ ಹಾಗೆ ಮಾಡಿಲ್ಲ. ಈಗ ಮಾಡುವುದು ಬೇಡ ಎಂದು ಕರ್ನಾಟಕ ಶೂದ್ರಶಕ್ತಿ ವೇದಿಕೆ ಹೇಳಿದೆ.
ಹಸಿದವರಿಗೆ ಅನ್ನವನ್ನು ಕೊಡುವುದು, ದುಡಿಯುವ ಜನರಾದ ನಮ್ಮ ಧರ್ಮವೇ ಹೊರತು ಮತ್ತೊಬ್ಬರ ಅನ್ನವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಕಸಿಯುವುದಿಲ್ಲ ಎಂದು ತಿಳಿಸಿದೆ.
ಪರಧರ್ಮವನ್ನು, ಪರವಿಚಾರವನ್ನು ಸಹಿಸುವುದೇ ನಿಜವಾದ ಸಂಪತ್ತು ಎಂಬ ಆದರ್ಶವನ್ನು ಒಂದು ಸಾವಿರ ವರ್ಷಗಳ ಹಿಂದೆಯೇ ಲೋಕಕ್ಕೆ ಸಾರಿದ್ದೇಔಎ. ಅದನ್ನು ಈಗ ಮತ್ತೆ ಲೋಕಕ್ಕೆ ಸಾರೋಣ ಎಂದು ಶೂದ್ರಶಕ್ತಿ ವೇದಿಕೆಯ ಕೆ.ದೊರೈರಾಜ್, ನಟರಾಜ ಬೂದಾಳ್, ಡಾ. ಬಸವರಾಜು, ಕೊಟ್ಟಶಂಕರ್, ಹೊನ್ನವಳ್ಳಿ ನಟರಾಜ್, ಜಿ.ವಿ.ಆನಂದಮೂರ್ತಿ, ಗಂಗಾಧರ್, ಉಜ್ಜಜ್ಜಿ ರಾಜಣ್ಣ ಹೇಳಿದರು.
ಲಿಂಗಾಯತರು, ಒಕ್ಕಲಿಗರು, ಬೇಡರು, ಬೆಸ್ತರು, ದಲಿತರು, ಉಪ್ಪಾರರು, ಗಾಣಿಗರು, ಕುರುಬರು, ಲಂಬಾಣಿಗರು, ಬಲಜಿಗರು, ನೇಕಾರರು, ಕೊರಮರು, ಕೊರಚರು, ಗೊಲ್ಲರು, ದಕ್ಕಲರು ಈ ಎಲ್ಲಾ ಹದಿನೆಂಟು ಕೋಮಿನವರ ಧರ್ಮವೇ ಈ ನೆಲದ ಧರ್ಮ. ಇವುಗಳನ್ನು ಹಿಂದೂಧರ್ಮದ ಜಾತಿಗಳು ಎಂದು ಕೆಲವರು ಸುಮಾರು ಇನ್ನೂರು ವರ್ಷಗಳ ಹಿಂದೆ ಕರೆಯಲಾಯಿತು ಎಂದು ತಿಳಿಸಿದರು.
ಇನ್ನೂರು ವರ್ಷಕ್ಕೂ ಮೊದಲು ಹಿಂದೂ ಎಂಬ ಹೆಸರಿನ ಯಾವ ಧರ್ಮವೂ ಇರಲಿಲ್ಲ. ಕೇವಲ ಜಾತಿಗಳು ಮಾತ್ರ ಇದ್ದವು. ಇವುಗಳಿಗೆ ಸಮಾನ ದೈವಗಳು, ಹಬ್ಬಹರಿದಿನಗಳು, ಆಹಾರ ಸಂಸ್ಕೃತಿ ಇತ್ತು. ಈಗಲೂ ಇದೆ ಎಂದು ವಿವರಿಸಿದರು.
ಈ ಎಲ್ಲಾ ಕೋಮಿನ ಜನರ ಧರ್ಮವೇ ಈ ನೆಲದ ಧರ್ಮ. ಈ ನೆಲದಲ್ಲಿ ಬ್ರಾಹ್ಮಣ ಧರ್ಮವೂ ಸಾವಿರಾರು ವರ್ಷಗಳಿಂದ ಇದೆ. ಈ ನೆಲದಲ್ಲಿ ಬದುಕಿ ಬಾಳಿದ/ ಬಾಳುತ್ತಿರುವ ಬೌದ್ಧ, ನಾಥ, ಸಿದ್ದ, ವಚನ, ಅಚಲ, ಶೈವ, ಜೈನ, ಸೂಫಿ ಮುಂತಾದ ಅನೇಕ ಧರ್ಮ ಪಂಥಗಳನ್ನು ಶೂದ್ರ ಧರ್ಮ ಬಾಳಿಸುತ್ತ ಬೆಳೆಸುತ್ತ ಬಂದಿದೆ ಎಂದು ತಿಳಿಸಿದರು.
ಧರ್ಮ, ವೃತ್ತಿ, ಜಾತಿಯ ಕಾರಣಕ್ಕೆ ಲಿಗತಾರತಮ್ಯದ ಕಾರಣಕ್ಕೆ ಈ ನೆಲದ ಧರ್ಮವು ಯಾರ ಬದುಕನ್ನೂ ಕಿತ್ತುಕೊಂಡಿಲ್ಲ. ಕೆಲವು ಧರ್ಮಗಳನ್ನು ಈ ನೆಲ ವಿಶ್ವದ ಅನೇಕ ಭಾಗಗಳಿಗೆ ನೀಡಿದೆ. ಈ ತಾಯಿಭೂಮಿ ಎಲ್ಲರಿಗೆ ಸೇರಿದ್ದು. ಇಲ್ಲಿ ಎಲ್ಲರಿಗೂ ಬಾಳುವ ಹಕ್ಕಿದೆ. ಯಾವ ಜೀವಿಯನ್ನಾಗಲೀ ಇಲ್ಲಿಂದ ಆಚೆಗೆ ನೂಕುವುದನ್ನು, ಅವರ ಬದುಕನ್ನು ಕಿತ್ತುಕೊಳ್ಳುವುದನ್ನು ಯಾವ ಧರ್ಮವೂ ಹೇಳುವುದಿಲ್ಲ. ಶೂದ್ರ ಧರ್ಮ ಅದನ್ನು ಎಂದೂ ಮಾಡಿಲ್ಲ. ಮುಂದೆಯೂ ಮಾಡಬಾರದು ಎಂದು ವಿಶ್ಲೇಷಿಸಿದರು.
ಶೂದ್ರಧರ್ಮವನ್ನು ವಿಕಾರವಾಗಿ ಬಿಂಬಿಸುವ ಅನೇಕ ದುಷ್ಟ ಸಮೀಕರಣಗಳನ್ನು ಈಗ ಹಿಂದೂಧರ್ಮದ ಹೆಸರಿನಲ್ಲಿ ಮುನ್ನೆಲೆಗೆ ತರಲಾಗುತ್ತಿದೆ. ಇದರಿಂದ ಕೇವಲ ರಾಜ್ಯ, ರಾಷ್ಟ್ರವಷ್ಟೇ ಅಲ್ಲ, ಇಡೀ ವಿಶ್ವಮಟ್ಟದಲ್ಲಿ ನಮ್ಮನ್ನು ಜನಾಂಗವಾದಿಗಳೆಂಬಂತೆ ಗ್ರಹಿಸಲಾಗುತ್ತಿದೆ. ಈ ನೆಲದ ಶೂದ್ರದಲಿತ ಧರ್ಮವು ಎಂದೂ ಬದುಕಿನ ಸಾಮರಸ್ಯವನ್ನು ಕೆಡಿಸುವ ದುಷ್ಟ ನಡೆಗಳನ್ನು ನಡೆಸಿಲ್ಲ ಎಂದರು.
ಶೂದ್ರಧರ್ಮಕ್ಕೆ ಇರುವ ಒಳ್ಳೆಯ ಹೆಸರನ್ನು ನಾವು ಕಾಪಾಡಿಕೊಳ್ಳಲೇಬೇಕಾದ ಅಗತ್ಯ ಇದೀಗ ನಮ್ಮ ಎದುರಿಗೆ ಬಂದಿದೆ. ಅನ್ನ ತಿನ್ನುವ ಎಲ್ಲ ಮನುಷ್ಯರ ವಿವೇಕ ಈಗ ಜಾಗೃತವಾಗಬೇಕಾಗಿದೆ. ನಾವು ಬದುಕುತ್ತಿರುವ ಕಾಡಿಗೆ ಬೆಂಕಿ ಇಟ್ಟು ಅಲ್ಲಿಯೇ ಸುಖವಾಗಿ ಇರುತ್ತೇವೆಂಬುದು ಅವಿವೇಕ, ನಾವು ಎಲ್ಲರ ಜೊತೆಗೆ ಸಾಮರಸ್ಯದಿಂದ ಬದುಕಿದಾಗಲೇ ಎಲ್ಲರಿಗೂ ಒಳಿತಾಗುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಬೇಕಾಗಿದೆ ಎಂದು ಹೇಳಿದರು.
ಶರಣರು, ಸೂಫಿಗಳು, ಕುವೆಂಪು, ಬೇಂದ್ರೆ ಮುಂತಾದ ಮಹಾನ್ ಲೇಖಕರು, ಅಂಬೇಡ್ಕರ್, ಲೋಹಿಯಾ, ನೆಹರು ಮುಂತಾದ ತಾತ್ವಿಕರು, ದೇವರಾಜ ಅರಸು, ಶಾಂತವೇರಿ ಗೋಪಾಲಗೌಡ ಮೊದಲಾದ ರಾಜಕಾರಣಿಗಳು ಆದರ್ಶವನ್ನು ನಮ್ಮ ಮುಂದಿಟ್ಟಿದ್ದಾರೆ. ಅವರೆಲ್ಲರ ಆಶಯಗಳನ್ನು ಮಣ್ಣುಪಾಲು ಮಾಡಿ ನಮ್ಮನ್ನು ನಾವು ಅವಮಾನಿಸಿಕೊಳ್ಳುತ್ತಿದ್ದೇವೆ. ಈ ಎಲ್ಲರ ಆದರ್ಶವನ್ನು ಪುನರ್ ಸ್ಥಾಪಿಸಬೇಕು. ಈ ನೆಲವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಬೇಕಾಗಿದೆ ಎಂದರು.