ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಮಾಜದ ಕೋಮು ಸಾಮರಸ್ಯ ಕದಡುವಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಾ ಆ ಮೂಲಕ ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಲೆಕ್ಕಾಚಾರವೇ ಮುಂದೆ ಬಿಜೆಪಿಗೆ ತಿರುಗುಬಾಣವಾಗಲಿದೆ. ಮಂದಿರ, ಮಸೀದಿ, ಚರ್ಚು ಎಲ್ಲಾ ಕಡೆ ಧ್ವನಿ ವರ್ಧಕಗಳನ್ನು ಹಾಕುತ್ತಾರೆ ಇದರಿಂದ ಇಷ್ಟುದಿನ ಯಾರಿಗೆ ತೊಂದರೆ ಆಗಿತ್ತು ಎಂದು ಪ್ರಶ್ನಿಸಿದ್ದಾರೆ.
ಕಣ್ಣೆದುರೇ ಸಮಾಜದ ಸಾಮರಸ್ಯ ಕುಸಿದುಬೀಳುತ್ತಿದ್ದರೂ, ಅದಕ್ಕೆ ಕಾರಣವಾದ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗದಷ್ಟು ಮುಖ್ಯಮಂತ್ರಿಗಳು ಅಸಮರ್ಥರೇ ಎಂದು ಕೇಳಿದ್ದಾರೆ.
ದಿನೇದಿನೇ ರಾಜ್ಯದಲ್ಲಿ ಇಷ್ಟೊಂದು ಅಶಾಂತಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಈ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು ಈ ಎಲ್ಲಾ ಸಮಾಜ ವಿರೋಧಿ ಕೃತ್ಯಗಳಿಗೆ ಸಹಮತವೋ ಅಥವಾ ಕಾನೂನು ಕ್ರಮ ಜರುಗಿಸಲಾಗದ ಅಸಹಾಯಕತೆಯೋ ಎಂದು ವ್ಯಂಗ್ಯ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಹಿತಾಸಕ್ತಿ ಮತ್ತು ಜನರ ಭವಿಷ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಮನೆಗೆ ಹೋಗುವುದು ಒಳಿತು ಎಂದು ಹೇಳಿದ್ದಾರೆ.